ಮಂಗಗಳ ಹಾವಳಿಗೆ ಬೇಸತ್ತ ಕೃಷಿಕರು

KannadaprabhaNewsNetwork |  
Published : Nov 10, 2026, 01:00 AM IST
ಎಳೆನೀರು ಕುಡಿಯುತ್ತಿರುವ ಮಂಗ. | Kannada Prabha

ಸಾರಾಂಶ

ಅಡಕೆ ತೋಟಗಳಿಗೆ ನುಗ್ಗುವ ಮಂಗಗಳು ಅಡಕೆ ಗೊನೆಗಳನ್ನು ಹಾಳು ಮಾಡುವುದರ ಜತೆಗೆ, ಎಳೆ ತೆಂಗಿನಕಾಯಿಗಳನ್ನು ಕಿತ್ತು ಅವುಗಳಲ್ಲಿರುವ ಎಳೆನೀರನ್ನು ಕುಡಿದು, ಉಳಿದ ಕಾಯಿಗಳನ್ನು ಕೆಳಗೆ ಎಸೆಯುತ್ತಿವೆ.

ಪ್ರಸಾದ್ ನಗರೆ

ಹೊನ್ನಾವರ: ತಾಲೂಕಿನ ಮುಗ್ವಾ ನಗರೆ ಗ್ರಾಮದಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೃಷಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮದ ವಿವಿಧ ಭಾಗಗಳಲ್ಲಿನ ಅಡಕೆ ತೋಟಗಳಿಗೆ ಗುಂಪು ಗುಂಪಾಗಿ ನುಗ್ಗುತ್ತಿರುವ ಮಂಗಗಳು ಅಡಕೆ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿವೆ. ಅಲ್ಲದೆ, ತೆಂಗಿನ ಮರಗಳಲ್ಲಿರುವ ಎಳೆಕಾಯಿಗಳನ್ನು ಕಿತ್ತು ಹಾನಿಗೊಳಿಸುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.ಅಡಕೆ ತೋಟಗಳಿಗೆ ನುಗ್ಗುವ ಮಂಗಗಳು ಅಡಕೆ ಗೊನೆಗಳನ್ನು ಹಾಳು ಮಾಡುವುದರ ಜತೆಗೆ, ಎಳೆ ತೆಂಗಿನಕಾಯಿಗಳನ್ನು ಕಿತ್ತು ಅವುಗಳಲ್ಲಿರುವ ಎಳೆನೀರನ್ನು ಕುಡಿದು, ಉಳಿದ ಕಾಯಿಗಳನ್ನು ಕೆಳಗೆ ಎಸೆಯುತ್ತಿವೆ. ಇದರಿಂದ ತೆಂಗು ಬೆಳೆಗಾರರಿಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆಸಿದ ತೋಟಗಳನ್ನು ಕಾಪಾಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

ಈಗಾಗಲೇ ಕೃಷಿ ವೆಚ್ಚ, ಕಾರ್ಮಿಕರ ಕೊರತೆ, ಬೆಳೆಗಳ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಮಂಗಗಳ ಹಾವಳಿ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಹಗಲು ಹೊತ್ತಿನಲ್ಲಿಯೇ ತೋಟಗಳಿಗೆ ಲಗ್ಗೆ ಇಡುವ ಮಂಗಗಳ ಗುಂಪನ್ನು ಓಡಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಆದರೂ ಮಂಗಗಳ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಕೃಷಿಕರ ಅಳಲಾಗಿದೆ.

ಪ್ರಾಣಿಗಳ ವಧೆಗೆ ನಿಷೇಧ: ಇನ್ನು ಕೃಷಿಗೆ ತೊಂದರೆಯನ್ನು ಉಂಟುಮಾಡುವ ಕಾಡುಪ್ರಾಣಿಗಳನ್ನು ಕೊಲ್ಲಲು ಕಾನೂನಿನ ತೊಡಕು ಇದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಕಾಡುಪ್ರಾಣಿಗಳನ್ನು ಹಿಡಿಯಲು ಅಥವಾ ಕೊಲ್ಲಲು ಭಯವನ್ನು ಪಡುತ್ತಾರೆ. ಮಂಗ, ಹಂದಿ, ಮುಳ್ಳುಹಕ್ಕಿ ಮೊದಲಾದ ಕಾಡುಪ್ರಾಣಿಗಳನ್ನು ಹೊಡೆಯಲು ಸಾಧ್ಯವಾಗುತ್ತಿಲ್ಲ.

ಇತ್ತ ಗ್ರಾಮೀಣ ಭಾಗದಲ್ಲಿ ರೈತರಿಗೆ ಕಾಡು ಪ್ರಾಣಿಗಳ ತೊಂದರೆ ಆಗುತ್ತದೆ ಎಂಬ ಅರಿವು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಅದನ್ನು ನಿಯಂತ್ರಿಸಿ ರೈತರಿಗೆ ಸಹಾಯ ಮಾಡುವುದಿಲ್ಲ ಎಂಬ ಮಾತನ್ನು ರೈತರು ಆಡಿಕೊಳ್ಳುತ್ತಾರೆ.ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಮಂಗಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ, ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಕೃಷಿಕರು ಒತ್ತಾಯಿಸಿದ್ದಾರೆ.

ಬೇಸರ: ಮಂಗಗಳ ಹಾವಳಿ ತೀವ್ರ ಹೆಚ್ಚಳವಾಗಿದೆ. ಕಳೆದ ವರ್ಷ ಮಂಗಗಳು ನಮ್ಮ ಭಾಗದಲ್ಲಿ ಇರಲಿಲ್ಲ. ಆದರೆ ಈ ವರ್ಷ ಮತ್ತೆ ಮಂಗಗಳ ಹಿಂಡೇ ಬಂದಿದೆ. ಸುಮಾರು‌ ಇಪ್ಪತೈದರಿಂದ ಮೂವತ್ತು ಮಂಗಗಳು ಇರಬಹುದು. ಎಳನೀರು ಕುಡಿದು ಹಾಗೂ ಅಡಕೆಯನ್ನು ಕಚ್ಚಿ‌ ಬಿಸಾಡುತ್ತದೆ. ಎಷ್ಟೇ ಗದ್ದಲ ಮಾಡಿದರೂ ಮಂಗಗಳನ್ನು ಓಡಿಸುವುದು ಕಷ್ಟವಾಗಿದೆ. ನಮ್ಮ ಬೆಳೆಗಳನ್ನು ಹಾಳು ಮಾಡಿದ್ದನ್ನು ನೋಡಿದರೆ ತೋಟಕ್ಕೆ ಹೋಗುವುದೇ ಬೇಸರ ಎನಿಸುತ್ತದೆ ಎಂದು ರೈತರಾದ ಸುಬ್ರಹ್ಮಣ್ಯ ಹೆಗಡೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ