ಹಳಿಯಾಳದಲ್ಲಿ ರೈತರಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ಆರಂಭ

KannadaprabhaNewsNetwork |  
Published : Oct 24, 2025, 01:00 AM IST
23ಎಚ್.ಎಲ್.ವೈ-1: ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು  ಘೋಷಿಸಿದ ಕಬ್ಬಿನ ದರ 3050ರೂ ವಿರೋಧಿಸಿ ಹಳಿಯಾಳದಲ್ಲಿ ಗುರುವಾರದಿಂದ ರೈತರು-ಕಬ್ಬು ಬೆಳೆಗಾರರು ಅನಿರ್ಧಿಷ್ಟಾವದಿಯವರೆಗೆ  ಮುಷ್ಕರವನ್ನು ಆರಂಭಿಸಿದರು. | Kannada Prabha

ಸಾರಾಂಶ

ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಘೋಷಿಸಿದ ಕಬ್ಬಿನ ದರ ₹3050ಕ್ಕೆ ರೈತ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿ ಟನ್‌ ಕಬ್ಬಿಗೆ ಕನಿಷ್ಠ ₹3363 ದರ ನಿಗದಿಪಡಿಸಬೇಕು.

ಈಐಡಿ ಕಾರ್ಖಾನೆ ಘೋಷಿಸಿದ ಕಬ್ಬಿನ ದರಕ್ಕೆ ರೈತರ ಆಕ್ರೋಶ

ಕನ್ನಡ ಪ್ರಭ ವಾರ್ತೆ ಹಳಿಯಾಳ

ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಘೋಷಿಸಿದ ಕಬ್ಬಿನ ದರ ₹3050ಕ್ಕೆ ರೈತ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿ ಟನ್‌ ಕಬ್ಬಿಗೆ ಕನಿಷ್ಠ ₹3363 ದರ ನಿಗದಿಪಡಿಸಬೇಕು, ರೈತರೊಂದಿಗೆ ದ್ವಿಪಕ್ಷೀಯ ಒಪ್ಪಂದ ಸಭೆಯನ್ನು ನಡೆಸಿದ ಮೇಲೆಯೇ ಕಾರ್ಖಾನೆ ಆರಂಭಿಸಬೇಕೆಂದು ಆಗ್ರಹಿಸಿ ಹಳಿಯಾಳದಲ್ಲಿ ಗುರುವಾರದಿಂದ ರೈತರು-ಕಬ್ಬು ಬೆಳೆಗಾರರು ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಆರಂಭಿಸಿದರು.

ತಾಲೂಕಾಡಳಿತ ಸೌಧದ ಎದುರಿನ ವೃತದಲ್ಲಿ ಮುಷ್ಕರ ಆರಂಭಿಸಿದ ರೈತರು ಕಾರ್ಖಾನೆಯ ರೈತ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ರೈತ ಸೋಲಬಾರದು:ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ಅನ್ನದಾತ ತನ್ನ ಶ್ರಮಕ್ಕೆ ತಕ್ಕಂತಹ ಯೋಗ್ಯ ಬೆಲೆ ಕೇಳುತ್ತಿದ್ದಾನೆ ಅಷ್ಟೇ, ವರ್ಷವಿಡಿ ಹೊಲದಲ್ಲಿ ಕಷ್ಟಪಟ್ಟು ದುಡಿದ ರೈತರ ಶ್ರಮ ಕಷ್ಟದ ನೋವು ಈ ಕಾರ್ಖಾನೆಯವರಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ವರ್ಷಗಳ ಹಿಂದೇ ಹಳಿಯಾಳದಲ್ಲಿ ಸತತ 54 ದಿನ ಹೋರಾಟ ಮಾಡಿದ ನೋವು ನಮ್ಮ ಮನದಲ್ಲಿ ಮಾಸುವ ಮುನ್ನವೇ, ಮತ್ತೊಂದು ಹೋರಾಟ ನಡೆಸಲು ಈ ಕಾರ್ಖಾನೆಯವರು ನಮ್ಮನ್ನು ಕೆಣಕಿದ್ದಾರೆ ಎಂದರು. ಗೌರವಯುತವಾಗಿ ನಮ್ಮ ಬೆಳೆಗಳಿಗೆ ದರವನ್ನು ನಿಗದಿಪಡಿಸಲು ಇವರಿಗೆ ಆಗುತ್ತಿಲ್ಲ. ಹೋರಾಟವಿಲ್ಲದೇ ನಮಗೆ ಉಳಿಗಾಲವಿಲ್ಲ, ಈ ಹೋರಾಟದಲ್ಲಿ ರೈತರು ಗೆಲ್ಲಬೇಕು, ರೈತ ನಾಡಿನ ಅನ್ನದಾತ ಯಾವತ್ತೂ ಸೋಲಬಾರದು, ನಮಗೆ ಬರಬೇಕಾಗಿದ್ದ ಬಾಕಿ ಹಣ ನೀಡಬೇಕು, ರೈತರ ನ್ಯಾಯೋಚಿತವಾದ ಬೇಡಿಕೆಗಳು ತಕ್ಷಣ ಈಡೇರಬೇಕು. ಕಾರ್ಖಾನೆಯವರಾಗಲಿ, ಆಡಳಿತ ವ್ಯವಸ್ಥೆಯಾಗಲಿ ರೈತರ ತಾಳ್ಮೆ ಪರೀಕ್ಷಿಸಲು ಹೋಗಬೇಡಿ ಎಂದು ತಾಕಿತು ಮಾಡಿದರು.ಯೋಗ್ಯ ದರ ನೀಡಿ:ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಮಾತನಾಡಿ, ಸರ್ಕಾರ ಪ್ರಸಕ್ತ ಸಾಲಿಗೆ ಕಬ್ಬಿಗೆ ಪ್ರತಿ ಟನ್‌ಗೆ ₹4000 ದರ ನಿಗದಿಪಡಿಸಿದೆ. ಆದರೆ ಕಾರ್ಖಾನೆಯವರು ರೈತರೊಂದಿಗೆ ಯಾವುದೇ ದ್ವಿಪಕ್ಷಿಯ ಸಭೆ ಒಪ್ಪಂದ ಮಾಡದೇ ಕಬ್ಬು ಕಟಾವು ಮತ್ತು ಸಾಗಾಟ ವೆಚ್ಚವೆಂದು ಪ್ರತಿ ಟನ್‌ಗೆ ₹950 ದರ ಕಡಿತ ಮಾಡಿ ₹3050 ದರವೆಂದು ಘೋಷಿಸಿದ್ದು, ಅದನ್ನು ನಾವು ಒಪ್ಪುವುದಿಲ್ಲ ಎಂದರು.

ಕಾರ್ಖಾನೆಯವರು ಆಕರಿಸುವ ಅವೈಜ್ಞಾನಿಕ ಕಬ್ಬಿನ ಕಟಾವು ಮತ್ತು ಸಾಗಾಟ ದರದ ಲೆಕ್ಕರಿಶೋಧನೆ ನಡೆಸಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹256 ಹೆಚ್ಚುವರಿಯಾಗಿ ಆಕರಿಸಲಾಗಿದ್ದು, ಅದನ್ನು ರೈತರಿಗೆ ಪಾವತಿಸಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಕಾರ್ಖಾನೆಯವರು ಇನ್ನೂವರೆಗೂ ₹256 ಬಾಕಿಯನ್ನು ರೈತರಿಗೆ ಪಾವತಿಸಲ್ಲ, ಆದರೇ ಈ ಬಾರಿ ಆಕರಿಸಿದ ಕಬ್ಬು ಕಟಾವು ಮತ್ತು ಸಾಗಾಣಿಕ ವೆಚ್ಚದಲ್ಲಿ ₹256 ಕಡಿತ ಮಾಡದೇ ₹950 ದರ ಆಕರಿಸಿ ಸರ್ಕಾರದ ಆದೇಶ ಉಲ್ಲಂಘಿಸಿದೆ ಮೇಲಾಗಿ ರೈತರಿಗೂ ಅನ್ಯಾಯ ಎಸಗಿದೆ. ಅದಕ್ಕಾಗಿ ಕಾರ್ಖಾನೆಯವರು ಪ್ರಸಕ್ತ ಸಾಲಿಗೆ ಕಡಿತಗೊಳಿಸಲು ಮುಂದಾಗಿರುವ ₹950 ದರದಲ್ಲಿ ₹256 ಕಡಿತಗೊಳಿಸಿ ಕಬ್ಬು ಕಟಾವು ಮತ್ತು ಸಾಗಾಟದ ವೆಚ್ಚವೆಂದು ₹694 ನಿಗದಿ ಪಡಿಸಿ, ರೈತರಿಗೆ ಪ್ರತಿ ಟನ್‌ ಕಬ್ಬಿಗೆ ಕನಿಷ್ಠ ₹3363 ದರವನ್ನು ನೀಡಬೇಕು ಎಂದು ಆಗ್ರಹಿಸಿದರು.ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷ ಶಂಕರ ಕಾಜಗಾರ ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಪ್ರಕಾಶ ಪಾಕರೆ, ಧಾರವಾಡ ಜಿಲ್ಲಾ ರೈತ ಪ್ರಮುಖರು ಮಾತನಾಡಿದರು. ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಧರಣಿ: ಮಳೆ ಆರಂಭವಾಗಿದ್ದರಿಂದ ಪ್ರತಿಭಟನಾ ನಿರತ ರೈತರು ತಾಲೂಕಾಡಳಿತ ಸೌಧದ ಆವರಣದತ್ತ ಧಾವಿಸಿ ಧರಣಿ ಪ್ರತಿಭಟನಾ ಸಭೆ ಮುಂದುವರೆಸಿದರು. ಈ ಸಂದರ್ಭ ಆಗಮಿಸಿದ ತಹಸೀಲ್ದಾರ ಫಿರೋಜ ಷಾಗೆ ಅಹವಾಲು ಮಂಡಿಸಿದ ಪ್ರತಿಭಟನಾಕಾರರು ಕಾರ್ಖಾನೆಯವರು ಯಾವತ್ತೂ ಸಭೆಯಲ್ಲಿ ನೀಡಿದ ಭರವಸೆಯಂತೆ ನಡೆದಿಲ್ಲ, ರೈತರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಯೇ ಕಾರ್ಖಾನೆ ಆರಂಭಿಸುವುದಾಗಿ ಜಿಲ್ಲಾಧಿಕಾರಿಗಳ ಸಮ್ಮುಖ ಭರವಸೆ ಕೊಟ್ಟ ಕಾರ್ಖಾನೆಯವರು ಅದಕ್ಕೆ ತದ್ವಿರುದ್ಧವಾಗಿ ನಡೆದು, ನಾವು ಹೋರಾಟಕ್ಕೆಳಿಯುವಂತೆ ಕೆಣಕಿದ್ದಾರೆ ಎಂದರು.ಅಹವಾಲು ಆಲಿಸಿದ ತಹಸೀಲ್ದಾರರು ಎಲ್ಲ ವಿದ್ಯಮಾನಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.ಹಳಿಯಾಳ ಮತ್ತು ಕಲಘಟಗಿ ತಾಲೂಕು ಕಬ್ಬು ಬೆಳೆಗಾರರು ಧರಣಿಯಲ್ಲಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ