ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಯಶಸ್ಸು: ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ

KannadaprabhaNewsNetwork |  
Published : Jan 08, 2024, 01:45 AM IST
ಸಿಹಿ ಹಂಚಿ ರೈತರ ಸಂಭ್ರಮ | Kannada Prabha

ಸಾರಾಂಶ

ಕಾಲುವೆ ನೀರಿಗಾಗಿ 21 ದಿನಗಳ ಕಾಲ ಸತತ ಆಹೋ ರಾತ್ರಿ ಧರಣಿ ನಡೆಸಿ, ಸರ್ಕಾರ ಮನವಿಗೆ ವಿಳಂಬ ನೀತಿ ಅನುಸರಿಸಿತು. ಕುಣಿ ತೋಡಿ ಜೀವಂತ ಸಮಾಧಿಯಾಗಲು ರೈತರು, ಮುಖಂಡರು ಸಿದ್ಧರಾಗಿದ್ದ ವೇಳೆ ಸರ್ಕಾರ ರೈತರ ಹೋರಾಟಕ್ಕೆ ಮಣೆದು 2.75 ಟಿಎಂಸಿ ನೀರು ಬಿಡಲು ಒಪ್ಪಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ನೀರಿಲ್ಲದೆ ಬೆಳೆ ಬಾಡುತ್ತಿರುವುದನ್ನು ನೋಡಿ ರೈತರು ಕಾಲುವೆಗೆ ನೀರು ಹರಿಸಬೇಕು ಎಂಬುದಾಗಿ ಪಟ್ಟು ಹಿಡಿದು ಕಳೆದ 23 ದಿನಗಳಿಂದ ಹೋರಾಟ ನಡೆಸುತ್ತಿರುವ ಅನ್ನದಾತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣೆದು 2.75 ಟಿಎಂಸಿ ನೀರು ಬಿಡಲು ಸೂಚಿಸಿದೆ.

ಬೆಳೆದು ನಿಂತ ಬೆಳಗಳ ರಕ್ಷಣೆಗಾಗಿ ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಯಶಸ್ಸು. ಕಾಲುವೆಗೆ ನೀರು ಹರಿಸಲು ಕಾರಣವಾದ ಸರ್ಕಾರ, ಸಚಿವರು, ಶಾಸಕರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷ್ಣ ಭಾಗ್ಯ ಜಲ ನಿಗಮ ಹಾಗೂ ಮಾಧ್ಯಮ ಬಳಗಕ್ಕೂ ರೈತರ ಪರವಾಗಿ ಅನಂತ ಕೃತಜ್ಞತೆಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಸಲ್ಲಿಸಿದ್ದಾರೆ.

ಭೀಮರಾಯನ ಗುಡಿ ಕೃಷ್ಣಭಾಗ್ಯ ಜಲ ನಿಗಮದ ಆಡಳಿತ ಕಚೇರಿ ಮುಂದೆ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪೊಲೀಸರಿಗೂ ಮಾಧ್ಯಮ ಮಿತ್ರರಿಗೂ ಹಾಗೂ ರೈತ ಮುಖಂಡರಿಗೂ ಸನ್ಮಾನಿಸಿ, ಸಿಹಿ ಹಂಚಿ ಮಾತನಾಡಿದರು.

ಈ ಹೋರಾಟ ನಮ್ಮ ಬದುಕಿನ ಪ್ರಶ್ನೆಯಾಗಿರುವುದರಿಂದ ನಾವು ಅನಿವಾರ್ಯವಾಗಿ ಗಟ್ಟಿಯಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿತ್ತು. ಈ ವೇಳೆ ಸರ್ಕಾರಕ್ಕೂ, ಸಚಿವರಿಗೂ, ಜಿಲ್ಲಾಡಳಿತಕ್ಕೂ, ಪೊಲೀಸರಿಗೂ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಸಿಟ್ಟಿನ ಭರಾಟೆಯಲ್ಲಿ ಮಾತನಾಡಿರಬಹುದು. ಧಿಕ್ಕಾರ ಕೂಗಿರಬಹುದು. ಆದರೆ, ಇದು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ. ಯಾವ ದ್ವೇಷವೂ ಇಲ್ಲ. ಅಧಿಕಾರಿಗಳು ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಸಂಯಮದಿಂದ ವರ್ತಿಸಿರುವದನ್ನು ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ರೈತರ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ:

ಬೆಳೆದು ನಿಂತ ಮೆಣಸಿನಕಾಯಿ ಬೆಳೆಗೆ ನೀರು ಬಿಡುವಂತೆ 22 ದಿನಗಳಿಂದ ರೈತರು ಹೋರಾಟ ನಡೆಸಿದ್ದಾರೆ. ಮಳೆ ಕೊರತೆ ಹಾಗೂ ಭೀಕರ ಬರಗಾಲದಿಂದಾಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಗಂಭೀರತೆ ಇದ್ದರೂ, ಡ್ಯಾಮಿನಲ್ಲಿ ನೀರಿನ ಕೊರತೆ ಇದ್ದರೂ ರೈತರ ಹಿತ ಕಾಪಾಡುವ ದೃಷ್ಟಿಯಿಂದ, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಿಗೇ ಈ ಭಾಗದ ರೈತರ ಸಮಸ್ಯೆ, ಪರಸ್ಥಿತಿ, ಅವರ ಸಂಕಷ್ಟದ ಬದುಕಿನ ಬಗ್ಗೆ ವಿವರವಾಗಿ ತಿಳಿಸಿ, ನೀರು ಬಿಟ್ಟರೆ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದೆವು.

ಮನವಿಗೆ ಪುರಸ್ಕರಿಸಿದ ಅವರು ತುರ್ತು ಸಭೆ ನಡೆಸಿ, ರೈತರ ಸಮಸ್ಯೆಗೆ ಸ್ಪಂದಿಸಿ 2.75 ಟಿಎಂಸಿ ನೀರು ಬಿಡಲು ಆದೇಶಿಸಿದ್ದು, ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಗೂ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೂ ಮತ್ತು ಶಾಂತಿಯುತವಾಗಿ ಹೋರಾಟ ಮಾಡಿದ ರೈತರಿಗೂ ಅಭಿನಂದನೆಗಳನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅಭಿನಂದನೆ ಸಲ್ಲಿಸಿದ್ದಾರೆ.

ರೈತ ಸಂಘದಿಂದ ಕೃತಜ್ಞತೆ:

21 ದಿನಗಳ ಕಾಲ ಸತತ ಆಹೋ ರಾತ್ರಿ ಧರಣಿ ನಡೆಸಿ, ಸರ್ಕಾರ ನಮ್ಮ ಮನವಿಗೆ ವಿಳಂಬ ನೀತಿ ಅನುಸರಿಸಿತು. ಕುಣಿ ತೋಡಿ ಜೀವಂತ ಸಮಾಧಿಯಾಗಲು ಸಿದ್ಧರಾಗಿದ್ದೆವು. ತಪ್ಪಿದ್ದರೆ ವಿಷ ಕುಡಿಯಲ್ಲಕ್ಕೂ ಸಿದ್ಧರಾಗಿರುವ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣೆದು 2.75 ಟಿಎಂಸಿ ನೀರು ಬಿಡಲು ಒಪ್ಪಿ ಆದೇಶಿಸಿದೆ. ರೈತರ ಹೋರಾಟದೊಂದಿಗೆ ಸಹಕರಿಸಿದ ಸಚಿವರಿಗೂ ಶಾಸಕರಿಗೂ ಜಿಲ್ಲಾಧಿಕಾರಿಯವರಿಗೂ ಕೆಬಿಜೆಎನ್ಎಲ್ ಅಧಿಕಾರಿಗಳಿಗೂ, ಸೂಕ್ತ ರಕ್ಷಣೆ ನೀಡಿದ ಪೊಲೀಸ್ ಇಲಾಖೆಗೂ, ಮಾಧ್ಯಮದವರಿಗೂ ರೈತ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ ತಿಳಿಸಿದರು.

ಇದು ಯಾರದೇ ಒಬ್ಬರ ಗೆಲುವಲ್ಲ, ರೈತರ ಗೆಲವು. ರೈತನಿಗೆ ಕಷ್ಟಕಾಲದಲ್ಲಿ ಸರ್ಕಾರ ನೆರವು ನೀಡಿದರೆ ಸರ್ಕಾರ ಸದಾ ಸ್ಮರಿಸುತ್ತೇವೆ. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಲು ಸ್ವಲ್ಪ ವಿಳಂಬ ನೀತಿ ಅನುಸರಿಸಿತು. ನಮಗೆ ನೀರು ಕೊಡಿ ಇಲ್ಲ ಸಾಯಿಸಿ ಎನ್ನುವ ದೃಢ ಸಂಕಲ್ಪ ಮಾಡಿ ಹೋರಾಟಕ್ಕೆ ಇಳಿದಿದ್ದೇವೆ. ಕೊನೆಗೂ ಸರ್ಕಾರ ನಮ್ಮ ಮನವಿ ಪುರಸ್ಕರಿಸಿರುವುದು ರೈತರಿಗೆ ಹೋದ ಜೀವ ಬಂದಂತಾಗಿದೆ. ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ನಾಗರತ್ನ ಪಾಟಿಲ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ