ಗಜೇಂದ್ರಗಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಪರಿಪೂರ್ಣ ಸಂಘಟನೆಯಾಗಿದ್ದು, ಮಹಿಳೆಯರು, ಯುವಕರು ಸಮಾಜದ ಎಲ್ಲ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ, ಅ.ಭಾ.ವೀ.ಲಿಂ. ಮಹಾಸಭಾ ಅಧ್ಯಕ್ಷ ವಿಜಯಕುಮಾರ ಪಾಟೀಲ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಉದ್ಘಾಟನೆ, ಯುವ ಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಪ್ರಾತಿನಿಧ್ಯ ಪಡೆಯಲು ಸಂಘಟಿಸುವ ಉದ್ದೇಶದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು, ಮಹಿಳಾ, ಯುವ ಘಟಕ ಸೇರಿ ವಿವಿಧ ಸಮಿತಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಬಸವ ಧರ್ಮ ಪ್ರಕಾರ ಎರಡೇ ಜಾತಿ, ಒಂದು ಗಂಡು ಇನ್ನೊಂದು ಹೆಣ್ಣು. ಇಬ್ಬರು ಸಮ. ಎಲ್ಲರನ್ನು ಸಮಾನರಾಗಿ ಕಾಣುವ ಮೂಲಕ ಒಂದಾಗಬೇಕಿದೆ. ಅಂದು ಹಾವನೂರ ಆಯೋಗ ನಮ್ಮನ್ನು ಒಡೆದು ಬಿಟ್ಟರು. ಹೀಗಾಗಿ ನಾವೆಲ್ಲರೂ ಲಿಂಗ ಕಟ್ಟಿಕೊಂಡು ತಲೆಯಲ್ಲಿರುವ ಉಪಜಾತಿಗಳ ಕಲ್ಪನೆಯಿಂದ ಹೊರಬರಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಬಿ.ಎಸ್. ಶೀಲವಂತ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಒಗ್ಗೂಡಿಸಲು 1904ರಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಮುನ್ನುಡಿ ಬರೆದಿದ್ದರು ಎಂದರು.


ಅಖಲಿ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಶ್ರಮಿಸಿ ಅಗಲಿದ ಗಣ್ಯರಿಗೆ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಶರಣ ಗೋಲಗೇರಿಯ ಗೊಲ್ಲಾಳೇಶ್ವರ ಹಾಗೂ ಕಾಟಕೂಟಯ್ಯಗಳ ಪುಣ್ಯಸ್ತ್ರೀ ಶರಣೆ ರೇಚವ್ವೆ ಪುಸ್ತಕ ಬಿಡುಗಡೆಗೊಳಿಸಲಾಯಿತು.

ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ವಿವಿಧ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಹುದ್ದೆ ಅಲಂಕರಿಸಿದ ಎಸ್.ಎಸ್. ಪಾಟೀಲ, ಮಿಥುನ ಪಾಟೀಲ, ಸಂಯುಕ್ತಾ ಬಂಡಿ ಹಾಗೂ ಡಾ. ಪಾರ್ವತಿಬಾಯಿ ಚವಡಿ ಸೇರಿ ಇತರರನ್ನು ಸನ್ಮಾನಿಸಲಾಯಿತು.

ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ತಾಲೂಕಾಧ್ಯಕ್ಷ ಪ್ರಭು ಚವಡಿ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ವೀ.ಲಿಂ. ಮಹಾಸಭಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿಲ್ಲಾಧ್ಯಕ್ಷ ಶರಣಬಪಸಪ್ಪ ಎಸ್ ಗುಡಿಮನಿ, ಸಂಯುಕ್ತಾ ಬಂಡಿ, ಕವಿತಾ ಜಾಲಿಹಾಳ, ಮಂಜುಳಾ ರೇವಡಿ, ಶಿವಕುಮಾರ ಶಶಿಮಠ, ಗೀತಾ ಎಸ್. ವಾಲಿ, ಶರಣಪ್ಪ ರೇವಡಿ, ಡಾ. ಬಿ.ವಿ. ಕಂಬಳ್ಯಾಳ, ಬಿ.ಎಂ. ಸಜ್ಜನರ, ಅಮರೇಶ ಬಳಿಗೇರ, ಸಿದ್ದು ಗೊಂಗಡಶೆಟ್ಟಿಮಠ, ಮಂಜುನಾಥ ಅಂಗಡಿ, ಅಮರೇಶ ಗೌರಿಮಠ, ಅವಿನಾಶ ಕೊಟಗಿ, ಹುಚ್ಚಪ್ಪ ಹಾವೇರಿ, ವಿಜಯ ಬೂದಿಹಾಳ, ವಿಶ್ವನಾಥ ಕುಷ್ಟಗಿ ಇತರರು ಇದ್ದರು.