ಬ್ಯಾಡಗಿ: ಪ್ರತಿಭಾ ಪುರಸ್ಕಾರ ಪ್ರಶಸ್ತಿಗಳು ಕೇವಲ ಅಂಕಗಳನ್ನು ಗೌರವಿಸುವುದಲ್ಲದೇ, ಮಕ್ಕಳಲ್ಲಿ ಮತ್ತಷ್ಟು ಸಾಧನೆ ಮಾಡುವ ಜವಾಬ್ದಾರಿ ಹೆಚ್ಚಿಸುತ್ತಿದ್ದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನು ಗೌರವಿಸುವ ಅತ್ಯುತ್ತಮ ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ 2025-26 ನೇ ಸಾಲಿನ ಎಸ್ಸೆಸ್ಸಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸುಪ್ತವಾಗಿ ಅಡಗಿರುವ ಒಂದು ವಿಶೇಷ ಶಕ್ತಿ, ಅಂತಹ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಗೌರವಿಸುವುದೇ ''''''''ಪ್ರತಿಭಾ ಪುರಸ್ಕಾರ'''''''' ಶಾಲಾ ಕಾಲೇಜು ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಅಥವಾ ಅಸಾಧಾರಣ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸದರಿ ಪುರಸ್ಕಾರ ನೀಡಿ ಗೌರವಿಸವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದರು.

ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ: ಆರ್ಥಿಕವಾಗಿ ಹಿಂದುಳಿದ ಅಥವಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣವನ್ನು ಮುಂದುವರಿಸಲು ಪ್ರತಿಭಾ ಪುರಸ್ಕಾರ ಸಹಾಯ ಮಾಡಲಿದೆ, ಪ್ರಶಸ್ತಿ ಮತ್ತು ಸನ್ಮಾನಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸ ತುಂಬುತ್ತವೆ, ವೇದಿಕೆಯ ಮೇಲೆ ಒಬ್ಬ ವಿದ್ಯಾರ್ಥಿ ಪುರಸ್ಕಾರ ಪಡೆಯುವುದನ್ನು ನೋಡಿ ಇತರ ವಿದ್ಯಾರ್ಥಿಗಳೂ ಸಹ ತಾವೂ ಸಾಧನೆ ಮಾಡಬೇಕು ಎಂಬ ಸ್ಫೂರ್ತಿ ಪಡೆಯಲಿದ್ದಾರೆ ಎಂದರು.

ಧನಾತ್ಮಕ ಪರಿಣಾಮ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪ್ರತಿಭಾ ಪುರಸ್ಕಾರವು ಕೇವಲ ಒಂದು ಪ್ರಶಸ್ತಿಯಲ್ಲ, ವಿದ್ಯಾರ್ಥಿಗಳ ನಿರಂತರ ಶ್ರಮಕ್ಕೆ ಸಿಕ್ಕ ಫಲವಾಗಿರುತ್ತದೆ, ಇದು ಅವರಲ್ಲಿ ಸಮಾಜದ ಬಗ್ಗೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಿಸುತ್ತದೆ, ಸೋಲಿಗೆ ಹೆದರದೆ ನಿರಂತರ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಈ ಪುರಸ್ಕಾರಗಳು ಸಾಕ್ಷಿಯಾಗಿವೆ ಎಂದರು.


ಸಮಾಜ ಪ್ರಗತಿಯತ್ತ: ಶ್ರೀ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಪ್ರತಿಭೆಯನ್ನು ಗೌರವಿಸುವ ಸಮಾಜವು ಯಾವಾಗಲೂ ಪ್ರಗತಿಯತ್ತ ಸಾಗುತ್ತದೆ. ಪ್ರತಿಭಾ ಪುರಸ್ಕಾರಗಳು ದೇಶದ ಭವಿಷ್ಯದ ಪ್ರಜೆ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಮತ್ತು ಅವರಲ್ಲಿ ಸಾಧನೆಯ ಛಲವನ್ನು ಬಿತ್ತಲು ಅತ್ಯಂತ ಅವಶ್ಯಕವಾಗಿವೆ, ಪ್ರತಿಭೆಗೆ ಸರಿಯಾದ ಪ್ರೋತ್ಸಾಹ ಸಿಕ್ಕಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದರು.

ಅತಿಥಿಗಳಾಗಿ ಉಪ್ಪಾರ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಭರಮಣ್ಣ ಉಪ್ಪಾರ, ರೋಟರಿ ಸಂಸ್ಥೆ ಅಧ್ಯಕ್ಷ ಪವಾಡೆಪ್ಪ ಆಚನೂರ, ರೋಟರಿ ಸಿಸ್ಟೆಂಟ್ ಗವರ್ನರ್ ಬಸವರಾಜ ಸುಂಕಾಪುರ, ಕಸಾಪ ಅಧ್ಯಕ್ಷ ಬಿ.ಎಂ.ಜಗಾಪುರ, ವರ್ತಕ ಅಜಯ್ ಅಗಡಿ ಮುಖಂಡರಾದ ಶಿವಮೂರ್ತಿ ಉಪ್ಪಾರ, ಮಾಲತೇಶ ಉಪ್ಪಾರ, ಚಂದ್ರಶೇಖರ ಆಟದವರ, ಗಣೇಶ ತುಮರಿಕೊಪ್ಪ, ಮಂಜುನಾಥ, ಕೃಷ್ಣಪ್ಪ, ರವಿ, ಕೇಶವಮೂರ್ತಿ, ವಿಜಯಶಂಕರ ಉಪ್ಪಾರ, ಬಸವರಾಜ ಬಡಗಡ್ಡಿ, ವೆಂಕಟೇಶ ಉಪ್ಪಾರ, ಶಿವಬಸಪ್ಪ ಉಪ್ಪಾರ ಸೇರಿದಂತೆ ಇನ್ನಿತರರಿದ್ದರು. ಬೀರಪ್ಪ ಬಸರಿಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು, ಶಂಕರ ಉಪ್ಪಾರ ಸ್ವಾಗತಿಸಿದರು. ಶ್ರೀನಿವಾಸ ಕರ್ನೂಲ ನಿರೂಪಿಸಿದರು. ರಕ್ಷಾ ಪ್ರಾರ್ಥಿಸಿದರು. ಹರ್ಷಿತಾ ನೃತ್ಯ ಪ್ರದರ್ಶನ ನೀಡಿದರು ಲಿಂಗರಾಜ ಹರ್ಲಾಪುರ ವಂದಿಸಿದರು.