ಕಂಪ್ಲಿ: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಿರುವುದನ್ನು ವಿರೋಧಿಸಿ ಕುಡುತಿನಿ ಭಾಗದ ರೈತರು ಹಾಗೂ ಹೋರಾಟಗಾರರು ನಡೆಸಿದ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದಿದ್ದು, 180ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಕಂಪ್ಲಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
“ನಮ್ಮ ಭೂಮಿಯನ್ನು ನಮಗೆ ವಾಪಸ್ ನೀಡಬೇಕು " ಎಂಬ ಆಗ್ರಹದೊಂದಿಗೆ ಹೋರಾಟ ನಡೆಸುತ್ತಿದ್ದವರನ್ನು ಬಂಧಿಸಿರುವುದು ದೌರ್ಜನ್ಯ ಎಂದು ಖಂಡಿಸಿದರು.
ಕುಡುತಿನಿ ಸುತ್ತಮುತ್ತ ಜಾರಿಗೊಳಿಸಿರುವ ಸೆಕ್ಷನ್ 144ನ್ನು ತಕ್ಷಣ ವಾಪಸ್ ಪಡೆಯಬೇಕು. ರೈತರ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಚರ್ಚಿಸಲು ತಕ್ಷಣ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕುಡುತಿನಿ ರೈತ ಮುಖಂಡರಾದ ಎಚ್. ರಮೇಶ್, ಯು. ಬಸವರಾಜ, ಖಾದರ್ ಬಾಷಾ ಸೇರಿದಂತೆ ಹಲವರು ಮಾತನಾಡಿ, ಭೂಮಿಗೆ ಹೊಸ ದರ ನಿಗದಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರದೆ, ರೈತರನ್ನು ಬಂಧಿಸಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇನ್ನೊಂದೆಡೆ ಶಾಸಕ ಜೆ.ಎನ್. ಗಣೇಶ್ ಆಸ್ಪತ್ರೆಗೆ ಧಾವಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ರೈತರು ಸುಮಾರು 4 ಕಿ.ಮೀ. ಪಾದಯಾತ್ರೆ ನಡೆಸಿದ ಪರಿಣಾಮ ನಿತ್ರಾಣಗೊಂಡಿದ್ದಾರೆ. ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿ ಹಾಗೂ ರೈತರ ನಡುವೆ ಸಮನ್ವಯದಿಂದ ಸಮಸ್ಯೆ ಇತ್ಯರ್ಥಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಹೋರಾಟ ಮುಂದುವರಿಯುವ ಸಾಧ್ಯತೆ ಇದೆ.