
ಕನ್ನಡಪ್ರಭ ವಾರ್ತೆ, ತುಮಕೂರು
ರೈತ ಸಂಘದ ರಾಜ್ಯ ಸಂಚಾಲಕ ಆನಂದ ಪಟೇಲ್ ಮತ್ತು ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ನೇತೃತ್ವದಲ್ಲಿ ರೈತ ಮುಖಂಡರು ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಹಾಗೂ ರಾಜ್ಯದಲ್ಲಿ ರೈತ ಹೋರಾಟಗಾರರ ಮೇಲಿರುವ ಕೇಸುಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಆನಂದ ಪಟೇಲ್, ಕೋಡಿಹಳ್ಳಿ ಚಂದ್ರಶೇಖರ್ ಅವರು 2013ರಲ್ಲಿ ಮಹಾದಾಯಿ ಮತ್ತು ಕಳಸ ಬಂಡೂರಿ ಯೋಜನೆ ಆರಂಭಿಸುವಂತೆ ಒತ್ತಾಯಿಸಿ, ಹಲವು ಹೋರಾಟಗಳ ನಂತರ ರೈಲ್ವೆ ತಡೆ ಕಾರ‍್ಯಕ್ರಮ ನಡೆಸಿದ್ದರು. ಆದರೆ ಅಂದಿನಿಂದ ಯಾವ ಕ್ರಮ ಕೈಗೊಳ್ಳದ ರೈಲ್ವೆ ಪೊಲೀಸರು, ಸೆಪ್ಟೆಂಬರ್ 28ರಂದು ಶಿರಸಿ ಐಬಿಯಲ್ಲಿರುವ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನೆಪದಲ್ಲಿ ಜೈಲಿಗೆ ಕಳುಹಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ. ರೈತರ ಹೋರಾಟ ಸ್ವಾರ್ಥಕ್ಕಾಗಿ ಅಲ್ಲ. ಈ ದೇಶದ ಭವಿಷ್ಯ ಸರಿಪಡಿಸಲು ನಡೆಸುವ ಹೋರಾಟವಾಗಿದೆ. ರೈಲ್ವೆ ಪೊಲೀಸರು ದಾಖಲಿಸಿರುವ ಕೇಸು ವಾಪಸ್ ಪಡೆಯುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ರೈತ ನಾಯಕರ ಬಂಧನದ ಮೂಲಕ ಅವರ ದ್ವನಿ ಅಡಗಿಸಬಹುದು ಎಂಬ ಭ್ರಮೆಯಲ್ಲಿ ಸರಕಾರವಿದೆ. ಆದು ಸಾಧ್ಯವಿಲ್ಲ ಎಂದು ಹೇಳಿದರು.ಸರಕಾರ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಹಾಗೆಯೇ ರೈತ ಮುಖಂಡರ ಮೇಲೆ ಹಾಕಿರುವ ಎಲ್ಲಾ ಕೇಸುನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ, ಹಳೆಯ ಪ್ರಕರಣದ ಹಿನ್ನಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಬಂಧಿಸಿರುವುದು ರೈತ ಸಮುದಾಯದಲ್ಲಿ ಆತಂಕ ಹಾಗೂ ಅಸಮಧಾನಕ್ಕೆ ಕಾರಣವಾಗಿದೆ ಎಂದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧೀಕ್ಷಕರಿಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರಾದ ಮಲ್ಲಿಕರ‍್ಜುನಯ್ಯ, ಬಿ.ಎಸ್.ರಾಜಣ್ಣ, ಅನಿಲ್‌ಕುಮಾರ್, ಬಾಳೇಗೌಡ, ಗಂಗಾಧರಯ್ಯ, ಕಲ್ಪನ, ತೋಟರಾಧ್ಯ, ಭೀಮರಾಜು, ಯೋಗಾನಂದಸ್ವಾಮಿ, ಸಿ.ವಿ.ನಾಗರಾಜಪ್ಪ, ಹನುಮಂತರಾಯಪ್ಪ, ಶಾಂತಕುಮಾರ್,ನಾಗರಾಜಯ್ಯ, ಚನ್ನಿಗರಾಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.