ಸಮೃದ್ಧ ವನವಿದ್ದರೆ ಮಾತ್ರ ಭವಿಷ್ಯದ ಬದುಕಿಗೆ ರಕ್ಷಣೆ

KannadaprabhaNewsNetwork |  
Published : Oct 01, 2026, 01:15 AM IST
ಪೋಟೋ, 30ಎಚ್‌ಎಸ್‌ಡಿ1: ಸಾಣೇಹಳ್ಳಿಯ  ಶಿವಕುಮಾರ ವನದಲ್ಲಿ ಆಯೋಜಿಸಿದ್ದ  ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ   ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಾಣೇಹಳ್ಳಿಯ ಶಿವಕುಮಾರ ವನದಲ್ಲಿ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕಾಡು ಎಂದರೆ ಕೇವಲ ಮರಗಳಲ್ಲ, ಪ್ರಾಣಿ-ಪಕ್ಷಿಗಳು ಹಾಗೂ ವಿವಿಧ ಜೀವಜಂತುಗಳಿರುವ ಸಮೃದ್ಧ ವನವಿದ್ದರೆ ಮಾತ್ರ ಭವಿಷ್ಯದ ಬದುಕಿಗೆ ರಕ್ಷಣೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ವನದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಲು ರಾಮೇಶ್ವರ ಯೋಜನಾ ಕಚೇರಿಯ ಆಶ್ರಯದಲ್ಲಿ ನಡೆದ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾಡನ್ನು ಕಡಿದು ನಾಡನ್ನು ಸುಧಾರಣೆ ಮಾಡಲು ಹೊರಟರೆ ಸಮಾಜದಲ್ಲಿ ನೆಮ್ಮದಿ ಸಿಗಲು ಸಾಧ್ಯವಿಲ್ಲ. ವೃಕ್ಷ ಸಂಪತ್ತನ್ನು ಬೆಳೆಸಿ ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ನಾಶದಿಂದಲೇ ಇಂದು ದೇಶಾದ್ಯಂತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಸವಾಲುಗಳು ಎದುರಾಗುತ್ತಿವೆ.

ಪಶ್ಚಿಮ ಘಟ್ಟಗಳಂತಹ ಜೀವವೈವಿಧ್ಯದ ತಾಣಗಳನ್ನು ಯಥಾವತ್ತಾಗಿ ರಕ್ಷಿಸಿದರೆ ಮಾತ್ರ ನಮ್ಮ ನದಿಗಳು ಮತ್ತು ಜೀವಜಂತುಗಳು ಜೀವಂತವಾಗಿರಲು ಸಾಧ್ಯ.

ಅಭಿವೃದ್ಧಿಯ ಹೆಸರಿನಲ್ಲಿ ಸುರಂಗ ತೋಡುವುದು ಹಾಗೂ ಕಾಡು ನಾಶ ಮಾಡುವುದರಿಂದ ಪ್ರಕೃತಿಗೆ ದೊಡ್ಡ ಮಟ್ಟದ ಧಕ್ಕೆಯಾಗಲಿದೆ ಎಂದರು.

ಪ್ರಕೃತಿಯ ಮುಂದೆ ಮಾನವನ ಆಟ ನಡೆಯುವುದಿಲ್ಲ. ಪಂಚಭೂತಗಳಾದ ಭೂಮಿ, ನೀರು, ಗಾಳಿ, ಆಕಾಶ ಮತ್ತು ಬೆಂಕಿಯ ಸಮತೋಲನ ಕಾಯ್ದುಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಟ್ಟು, ಅದಕ್ಕೆ ನೀರು-ಗೊಬ್ಬರ ಹಾಕಿ ಸಂರಕ್ಷಿಸುವ ಸಂಕಲ್ಪ ಮಾಡಬೇಕು. ಗಿಡಗಳನ್ನು ಬೆಳೆಸಿದರೆ ಅವು ಮುಂದಿನ ಪೀಳಿಗೆಗೆ ಆಸರೆಯಾಗಲಿವೆ.

ಧರ್ಮಸ್ಥಳ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ದಶಲಕ್ಷ ವೃಕ್ಷಾರೋಹಣ ಹಾಗೂ ಕೆರೆಗಳ ಹೂಳೆತ್ತುವ ಸೇವೆಯಂತಹ ಪರಿಸರ ಕಾಳಜಿಯ ಕಾರ್ಯಕ್ರಮಗಳು ಅಭಿನಂದನೀಯ ಎಂದರು.

ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗಿ ಕಾಂಕ್ರೀಟ್ ನಾಡು ಹೆಚ್ಚಾಗುತ್ತಿದೆ. ಕಾಡಿನಲ್ಲಿ ಹಣ್ಣಿನ ಗಿಡಮರಗಳ ಕೊರತೆಯಿಂದಾಗಿ ವನ್ಯಜೀವಿಗಳು ಹಾಗೂ ಮಂಗಗಳು ಆಹಾರ ಅರಸಿ ನಾಡಿಗೆ ಬಂದು ತೊಂದರೆ ನೀಡುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಶಲಕ್ಷ ಸಸಿ ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು ಹೊಸದುರ್ಗ ತಾಲೂಕಿನಲ್ಲೂ ಸಕ್ರಿಯವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಎಸ್ ಸಿದ್ದಪ್ಪ, ಗ್ರಾಪಂ ಪಿಡಿಒ ಲಿಂಗರಾಜ್‌, ಕೆರೆ ಸಮಿತಿಯ ಅಧ್ಯಕ್ಷ ಎಸ್ ಆರ್ ಮಂಜುನಾಥ್ ಮಾತನಾಡಿದರು.

ಕೃಷಿ ಮೇಲ್ವಚಾರಕ ಉಮೇಶ್ ಜಿ ಸ್ವಾಗತಿಸಿ ನಿರೂಪಿಸಿದರು‌. ಅಕ್ಕನ ಬಳಗದ ಮಮತ, ಶಕುಂತಲ, ರತ್ನಮ್ಮ, ರಾಣಿ ವಚನಗೀತೆಗಳನ್ನು ಹಾಡಿದರು. ಸತೀಶ್, ಷಡಾಕ್ಷರಿ, ಧನ್ಯ ಪ್ರಜ್ವಲ್, ಸಿದ್ದಮರಿ, ಮಂಜಯ್ಯ, ವಿರೂಪಾಕ್ಷಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ