ಜಮೀನುಗಳಿಗೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ರಾಜ್ಯ ಹೆದ್ದಾರಿ ಬಂದ್‌

KannadaprabhaNewsNetwork | Published : Oct 8, 2023 12:02 AM

ಸಾರಾಂಶ

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಗಜೇಂದ್ರಗಡದಲ್ಲಿ ರೈತರ ಹೆದ್ದಾರಿ ತಡೆ ನಡೆಸಿದರು.
ಗಜೇಂದ್ರಗಡ: ಜಮೀನುಗಳಲ್ಲಿನ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತ ಹಿನ್ನೆಲೆಯಲ್ಲಿ ಗೌಡಗೇರಿ ಗ್ರಾಮದ ರೈತರು ಗಜೇಂದ್ರಗಡ ಕುಷ್ಟಗಿ ರಸ್ತೆ ಹೆದ್ದಾರಿ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ‌ ನಡೆದಿದೆ. ಜನರಿಗೆ ಅನ್ನ ‌ನೀಡುವ ರೈತರ ಜಮೀನುಗಳಿಗೆ ವಿದ್ಯುತ್ ನೀಡಿ ಎಂದರೆ ವಿದ್ಯುತ್ ಅಭಾವವಿದೆ ಎನ್ನುವ ಅಧಿಕಾರಿಗಳು ದೊಡ್ಡ ದೊಡ್ಡ ಗ್ರ್ಯಾನೈಟ್ ಫ್ಯಾಕ್ಟರಿಗಳಿಗೆ ಹಗಲು ರಾತ್ರಿ ಹೆಸ್ಕಾಂನವರು ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ‌ಇಂತಹ ದ್ವಂದ್ವ ನೀತಿ ಎಂದು ರೈತರು ‌ಕಿಡಿ ಕಾರಿದರು. ಸರ್ಕಾರದ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಪ್ರಚಾರ ಮಾಡುತ್ತಿದೆ.ಆದರೆ ಇಂದು ‌ಒಂದನೇ ತರಗತಿಯಿಂದ ಡಿಗ್ರಿ ವರೆಗೆ ಪರೀಕ್ಷೆಗಳು ನಡೆಯುತ್ತಿವೆ. ಸಂಜೆ 6ರಿಂದ 10 ರವರೆಗೆ ವಿದ್ಯುತ್ ಪೂರೈಕೆ ಮಾಡಿ ಎಂದು ಮನವಿ ಮಾಡಿದರೂ ಸಹ ವಿದ್ಯುತ್ ಪೂರೈಕೆ ಸ್ಥಗಿತ ಮಾಡುವ ಮೂಲಕ ಹೆಸ್ಕಾಂ ರೈತರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲು ಮುಂದಾಗಿದೆ ರಸ್ತೆ ಬಂದ್ ತೀವ್ರ ಗೊಳಿಸಲು‌ ಮುಂದಾದರು. ಗೌಡಗೇರಿ ಗ್ರಾಮದಲ್ಲಿ 400 ಮನೆಗಳಿಗೆ ವಿದ್ಯುತ್ ಸ್ಥಗಿತವಾದ‌ ಪರಿಣಾಮ ಮನೆಯಲ್ಲಿ ಹುಳ, ಉಪ್ಪಡಿಗಳು ಊಟದಲ್ಲಿ ಬಿದ್ದರೂ ಸಹ ಕಣ್ಣು‌‌‌ ಮುಚ್ಚಿಕೊಂಡು ತಿನ್ನಬೇಕಿದೆ. ಸಾಲ,ಸೋಲ‌ ಮಾಡಿ‌ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇವೆ, ಇವರು ಕರೆಂಟ್ ತೆಗೆದು ಮಕ್ಕಳ ಶಿಕ್ಷಣದೊಂದಿಗೆ ಕಳೆದ ೩ ದಿನಗಳಿಂದ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೆ ಸಂಚಾರಕ್ಕೆ ತೊಂದರೆಯಾಗಲಿದೆ ಪ್ರತಿಭಟನೆ ಸಡಿಲಿಸುವಂತೆ ಮನವಿ‌ ಮಾಡಲು ಮುಂದಾದರು. ಆದರೆ ರೈತರಿಗೆ ಆಗುತ್ತಿರುವ ಅನ್ಯಾಯ ಕಾಣುತ್ತಿಲ್ಲವೇ ನಿಮಗೆ, ರಸ್ತೆ ಸಂಚಾರಕ್ಕೆ ಆಗುತ್ತಿರುವ ತೊಂದರೆ ಕಾಣುತ್ತಿದೆ.‌ ನಾವು ರಸ್ತೆ‌ ಬಿಟ್ಟು ತೆರಳುವದಿಲ್ಲ ಎಂದು ಪಟ್ಟು ಹಿಡಿದಾಗ ‌ಪಿಎಸ್ಐ ಸೋಮನಗೌಡ ಗೌಡ್ರ ಮಧ್ಯಪ್ರವೇಶಿಸಿ ಪ್ರತಿಭಟನಾಕಾರ ರೈತರನ್ನು ಹೆಸ್ಕಾಂ ಗ್ರಿಡ್ ನಲ್ಲಿ ‌ಪ್ರತಿಭಟನೆ ಮಾಡಲು ತೆರಳುವಂತೆ ಸೂಚಿಸಿದರು. ಬಳಿಕ ಗ್ರಿಡ್ ನಲ್ಲಿ ‌ರೈತರು ಪ್ರತಿಭಟನೆ‌ ನಡೆಸುತ್ತಿದ್ದಾರೆ. ಪ್ರತಿಭಟನೆಯಿಂದಾಗಿ‌ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ವೀರೇಶ ರಾಠೋಡ, ಕಳಕಪ್ಪ‌ ಕಲ್ಗುಡಿ, ವೀರಪ್ಪ ದುಮ್ಮಾಳ, ಬಾಬು ಜಾನಾಯಿ, ಕರಿಯಪ್ಪ ಜಾನಾಯಿ, ಲಕ್ಷ್ಮಣ ಕಾಸಾಯಿ, ಖಾಜಾಸಾಬ ಮಾಲ್ದಾರ ಸೇರಿ‌ ಇತರರು ‌ಇದ್ದರು.

Share this article