ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ಎತ್ತರದ ಕಾರ್ಯಾಚರಣೆಯನ್ನು ರೈತ ಸಂಘದಿಂದ ಅ.9ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.ಆಲಮಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿಗಳ ಭಾಗ್ಯಗಳಲ್ಲಿ, ಅಭಿವೃದ್ಧಿ ಗ್ಯಾರಂಟಿ ರಾಜ್ಯ ಸರ್ಕಾರ ಮರೆತಿದೆ. ಅದಕ್ಕಾಗಿ ಜಲಾಶಯವನ್ನು ನಾವೇ ರೈತರು ಕೂಡಿಕೊಂಡು ಎತ್ತರಿಸುತ್ತೇವೆ. ಪ್ರತಿ ಗ್ರಾಮ, ಗ್ರಾಮಗಳಲ್ಲಿಯೂ ಜಲಾಶಯ ಎತ್ತರದ ಬಗ್ಗೆ ಅರಿವು ಮೂಡಿಸಲಾಗುವುದು, ಸರ್ಕಾರಕ್ಕೂ ಹೋರಾಟದ ಬಗ್ಗೆ ಮೊದಲೇ ತಿಳಿಸಲಾಗುವುದು. ಜಲಾಶಯದ ಎತ್ತರದಿಂದ ಬಾಧಿತಗೊಳ್ಳುವ ಪ್ರತಿ ರೈತರಿಗೂ ಗರಿಷ್ಠ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಶನಿವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಪುರುಷಾರ್ಥಕ್ಕಾಗಿ ಕೃಷ್ಣೆಗೆ ಬಾಗಿನ ಅರ್ಪಿಸಿದರು ಎಂಬುದೇ ತಿಳಿಯುತ್ತಿಲ್ಲ. ಯುಕೆಪಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ಕಾಲಮಿತಿಯಿಲ್ಲ. ಪೂರ್ಣಗೊಳಿಸುವ ಯಾವುದೇ ಜವಾಬ್ದಾರಿಯೂ ರಾಜ್ಯ ಸರ್ಕಾರಕ್ಕಿಲ್ಲ. ಯುಕೆಪಿಯ ವಿಷಯಗಳಲ್ಲಿ ಎಲ್ಲಾ ಪಕ್ಷದವರು ರಾಜಕೀಯ ಮಾಡುತ್ತಲೇ ಸಾಗುತ್ತಿದ್ದಾರೆ. ಈಗ ಭೂಸ್ವಾಧೀನದ ಪ್ರಶ್ನೆ ಎದ್ದಿದ್ದು, ಅದರಲ್ಲಿಯೂ ರಾಜಕೀಯ ನಡೆಯುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.1999ರಲ್ಲಿ ಆಗಿನ ರೈತ ಸಂಘದ ರಾಜ್ಯಾಧ್ಯಕ್ಷ ಪ್ರೊ.ಎಚ್.ಡಿ.ನಂಜುಂಡಸ್ವಾಮಿ, ಪಂಚಪ್ಪ ಕಲಬುರಗಿ ಹಾಗೂ ನಮ್ಮ ನೇತೃತ್ವದಲ್ಲಿ ಆಲಮಟ್ಟಿಯಲ್ಲಿ ಬೃಹತ್ ಹೋರಾಟ ನಡೆಸಿದ್ದೇವು. ಆಗ ಜಲಾಶಯದ ಗೇಟ್ ಅನ್ನು 519.6 ಮೀಗೆ ಅಳವಡಿಸಿರಲಿಲ್ಲ. ನಮ್ಮ ಹೋರಾಟದ ಬಳಿಕ ಎಚ್ಚೆತ್ತ ಆಗಿನ ಎಸ್.ಎಂ.ಕೃಷ್ಣ ಸರ್ಕಾರ ಜಲಾಶಯದ ಗೇಟ್ ಅಳವಡಿಸಲು ತ್ವರಿತ ಕ್ರಮ ಅನುಸರಿಸಿತು. ಈಗ ಅದೇ ಮಾದರಿಯಲ್ಲಿ ಅ.9ರಂದು ಹೋರಾಟ ನಡೆಸುತ್ತೇವೆ. ಡೋಣಿ ನದಿ ಪ್ರವಾಹದ ಬಗ್ಗೆಯೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕಾವೇರಿಯಲ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಎರಡೂವರೆ ವರ್ಷದ ಹಿಂದೆ ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಾದಯಾತ್ರೆ ನಡೆಸಿದ್ದರು. ಅದೇ ಪಾದಯಾತ್ರೆಯ ಮೂಲಕ ಅಧಿಕಾರಕ್ಕೂ ಬಂದೂ ಎರಡೂವರೆ ವರ್ಷ ಆಗುತ್ತಾ ಬಂತು. ಆದರೆ ಅದರ ಯಾವುದೇ ಕಾರ್ಯವೂ ಆಗಿಲ್ಲ. ಯೋಜನೆಗೆ ಕೇಂದ್ರದ ಅನುಮತಿ ಬೇಕು ಎಂದು ಹೇಳುತ್ತಾ ಸುಮ್ಮನಾಗಿದ್ದಾರೆ. ಕೇಂದ್ರದ ಅನುಮತಿ ಬೇಕಿದ್ದರೇ ಪಾದಯಾತ್ರೆ ಏಕೆ ಮಾಡಬೇಕಿತ್ತು? ಎಂದು ಅವರು ಪ್ರಶ್ನಿಸಿದರು. ಅದೇ ರೀತಿ ತುಂಗಭದ್ರಾ ಜಲಾಶಯದ ಹಿಂಭಾಗದಲ್ಲಿಯೂ ಸಮನಾಂತರ ಜಲಾಶಯ ನಿರ್ಮಿಸಬೇಕಿದೆ ಎಂದರು. ಕೃಷ್ಣಾ, ಮಹಾದಾಯಿ, ತುಂಗಭದ್ರಾ ನದಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಇಡೀ ದೇಶದಲ್ಲಿ ಯಾವುದೇ ಚುನಾವಣೆ ನಡೆಯಲಿ ಕರ್ನಾಟಕದಿಂದಲೇ ಹಣ ಹೋಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಎಲ್ಲದಕ್ಕೂ ಪರಿಸರ, ಅರಣ್ಯ ಕೇಂದ್ರ ಸರ್ಕಾರದ ಅನುಮತಿ ಎಂದು ಹೇಳುತ್ತಾ ಕೂರಬಾರದು. ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರರೆಡ್ಡಿ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಜಲಯಜ್ಞ ಯೋಜನೆಯ ಫಲವಾಗಿ ಅಲ್ಲಿ ಸಂಪೂರ್ಣ ನೀರಾವರಿಯಾಯಿತು. ಅವರು ಯಾವುದೇ ಅನುಮತಿ ಎಂದು ಸುಮ್ಮನೆ ಕೂಡಲಿಲ್ಲ ಎಂದು ತಿಳಿಸಿದರು.ಇದೇ ವೇಳೆ ರೈತರೆಲ್ಲರೂ ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಭಕ್ತರಹಳ್ಳಿ ಭೈರೇಗೌಡ, ಮಹಾದೇವಿ ಬೇನಾಳಮಠ, ಎಸ್.ಬಿ. ಕಂಬೋಗಿ, ಬಸವಂತಪ್ಪ ಕಾಂಬಳೆ, ಚಂದ್ರಶೇಖರ ಜಮಖಂಡಿ, ಮಲ್ಲನಗೌಡ ಪಾಟೀಲ, ಶಿವಪುತ್ರ ನಂದಿಹಾಳ, ಮಲ್ಲಿಕಾರ್ಜುನ ನಾವದಗಿ ಮತ್ತಿತರರು ಇದ್ದರು.