ಕನ್ನಡಪ್ರಭ ವಾರ್ತೆ ಬೆಳಗಾವಿ
ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ಬೆಂಬಲಿಸಿ ರಾಜ್ಯಾದ್ಯಂತ ರೈತ ಸಂಘಟನೆಗಳು ಡಿ.6 ರಿಂದ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನದಲ್ಲಿ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ದಕ್ಷಿಣ ಭಾರತ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ರೈತ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚಳವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿ, ಫಸಲ್ ಬಿಮಾ ಬೆಳೆವಿಮೆ ಯೋಜನೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಹೋರಾಟ ಮಾಡುತ್ತಿದ್ದ ರೈತ ಮುಖಂಡರನ್ನು ದೇಶದ್ರೋಹಿಗಳು, ಕಳ್ಳಕಾಕರ ರೀತಿಯಲ್ಲಿ ಪೊಲೀಸರು ಮಧ್ಯರಾತ್ರಿ ಬಂಧಿಸಿ ಅಪಮಾನ ಮಾಡಿದ್ದಾರೆ. ನೂರಾರು ರೈತರು ಕನೋರಿ ಬಾರ್ಡರ್‌ನಲ್ಲಿ ಉಪವಾಸ ಕುಳಿತಿದ್ದಾರೆ. ಈ ಸತ್ಯಾಗ್ರಹ 7ನೇ ದಿನಕ್ಕೆ ಮುಂದುವರಿದಿದೆ. ಸರ್ಕಾರ ರೈತರ ಹಕ್ಕನ್ನು ದಮನ ಮಾಡಲು ಯತ್ನಿಸುತ್ತಿದೆ. ಸರ್ಕಾರದ ವರ್ತನೆ ಖಂಡಿಸುತ್ತೇನೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ ನಿರೂಪಿಸಿದರು. ಮುಖಂಡರಾದದ ರಮೇಶ ಹಿರೇಮಠ, ಎಸ್.ಬಿ. ಸಿದ್ನಾಳ, ಮಾರುತಿ ನಲವಾಡೆ. ಪಂಚಪ್ಪ ಗಂಗಣ್ಣ. ಶಂಕರಗೌಡ ಹೂಸಗೌಡರ, ಬಾಪುಗೌಡ ಪಾಟೀಲ, ಈರಣ್ಣ ರಾಜನಾಳ ಇತರರು ಇದ್ದರು.