ಶಿವಮೊಗ್ಗ: ನಗರದ ಮಧ್ಯ ಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಈದ್ಗಾ ಮೈದಾನದ ವಿವಾದ ಮಂಗಳವಾರ ಮತ್ತೆ ಭುಗಿಲೆದ್ದಿದೆ. ಈದ್ಗಾ ಮೈದಾನದಲ್ಲಿ ಬೇಲಿ ಹಾಕಿರುವ ಪ್ರಕರಣ ಸಂಬಂಧ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದು ಮಹಾನಗರ ಪಾಲಿಕೆಗೆ ಸೇರಿದ ಜಾಗ. ಭಿನ್ನಕೋಮಿನವರು ಸೋಮವಾರ ಪ್ರಾರ್ಥನೆ ಮಾಡಿದ್ದಾರೆ. ಹಬ್ಬ ಶಾಂತಿಯುತವಾಗಿ ನಡೆದಿದೆ. ಅವರ ಪ್ರಾರ್ಥನೆಗೆ ನಾವು ಯಾವುದೇ ಅಡ್ಡಿಪಡಿಸಿಲ್ಲ. ಹಿಂದೂ ಮತ್ತು ಮುಸ್ಲಿಂ ಎಲ್ಲರೂ ನಗರದಲ್ಲಿ ಭಾವೈಕೈತೆಯಿಂದ ಇದ್ದಾರೆ. ಆದರೆ, ಪ್ರಾರ್ಥನೆ ಮುಗಿದ ಬಳಿಕ ಏಕಾಏಕಿ ಬೇಲಿ ಹಾಕಿದ್ದು, ಇದು ಮುಸ್ಲಿಂರ ಏಕಪಕ್ಷೀಯ ತೀರ್ಮಾನವಾಗಿದೆ. ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿಲ್ಲ. ಪಾಲಿಕೆಯ ಗಮನಕ್ಕೂ ಬಂದಿಲ್ಲ. ಪೊಲೀಸ್ ಇಲಾಖೆಗೂ ತಿಳಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮತ್ತೆ ಇದೊಂದು ದೊಡ್ಡ ವಿವಾದವಾಗಿ ಪರಿಣಮಿಸುವ ಮೊದಲೇ ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವೇ ತೆರವುಗೊಳಿಸುತ್ತೇವೆ ಎಂದು ಕೆಲವರು ಪಟ್ಟುಹಿಡಿದು ಸ್ಥಳದಲ್ಲೇ ಧರಣಿ ಕೂತರು.
ಬೇಲಿ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಬೇಲಿಗೆ ಅಡ್ಡವಾಗಿ ರೈಲ್ವೆ ಕಂಬಿಗಳನ್ನು ಕೂಡ ಬಳಸಿದ್ದು, ಇದು ಕಾನೂನು ಬಾಹಿರ ಇದರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ. ಬೇಲಿ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಆಹ್ವಾಲನ್ನು ಕೇಳಿ ಸಂಜೆ 7 ಗಂಟೆಯೊಳಗೆ ಬೇಲಿಯನ್ನು ತೆರವುಗೊಳಿಸುತ್ತೇವೆ. ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು. ಇದಕ್ಕೆ ಸಮಯ ಬೇಕಾಗುತ್ತದೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ. ಶಿವಮೊಗ್ಗದ ಜನರಿಗೆ ತೊಂದರೆಯಾಗುವುದು ಬೇಡ. ಏನೇ ವಿವಾದ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳೋಣ. ಏಳು ಗಂಟೆಯೊಳಗೆ ತೆರವುಗೊಳಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಧರಣಿ ಹಿಂಪಡೆದರು. ಮುನ್ನೇಚರಿಕಾ ಕ್ರಮವಾಗಿ ಈದ್ಗಾ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ವಿಎಚ್‌ಪಿ ಪ್ರಮುಖರಾದ ರಮೇಶ್ ಜಾಧವ್, ಸುರೇಶ್ ಬಾಬು, ಬಿಜೆಪಿ ಪ್ರಮುಖರಾದ ಮೋಹನ್‌ರೆಡ್ಡಿ, ದೀನ್‌ದಯಾಳ್, ಶಿವಾನಂದ, ಕಿರಣ್, ಹಿಂದೂಪರ ಸಂಘಟನೆಯ ಪ್ರಮುಖರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಬೇಲಿ ತೆರವು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಹಿಂದುಪರ ಸಂಘಟನೆಗಳ ಕಾರ್ಯಕರ್ತರಿಗೆ ನೀಡಿದ ಭರವಸೆಯಂತೆ ಸಂಜೆಯೊಳಗೆ ಈದ್ಗಾ ಮೈದಾನದಲ್ಲಿ ಹಾಕಿದ್ದ ಬೇಲಿಯನ್ನು ಪೊಲೀಸರು ತೆರವುಗೊಳಿಸಿದರು.