ವಿಶೇಷ ವರದಿ
ರಾಜ್ಯದ ಮೊದಲ ಪುರಸಭೆ ಎಂಬ ಖ್ಯಾತಿಗೆ ಪಾತ್ರವಾದ ಅಥಣಿ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆ.2ರಂದು ಚುನಾವಣೆ ನಿಗದಿ ಆಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಒಬಿಸಿ ಮಹಿಳೆಗೆ ಮೀಸಲಾಗಿದೆ.
ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 9, ಪಕ್ಷೇತರರು 3 ಜನ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 9 ಹಾಗೂ ಮೂವರು ಪಕ್ಷೇತರ ಸದಸ್ಯರು ಸವದಿಯವರನ್ನು ಹಿಂಬಾಲಿಸಿ ಕಾಂಗ್ರೆಸ್ ಗೆ ವಲಸೆ ಬಂದರು.ವಿರೋಧ ಪಕ್ಷವಿಲ್ಲದ ಏಕೈಕ ಪುರಸಭೆ:
ಅಧಿಕಾರಕ್ಕೆ ಬಣಗಳ ಮಧ್ಯೆ ಪೈಪೋಟಿ: ಪುರಸಭೆಯಲ್ಲಿ ವಿರೋಧ ಪಕ್ಷದ ಓರ್ವ ಸದಸ್ಯ ಇಲ್ಲದಿದ್ದರೂ ಪಕ್ಷದೊಳಗೆ ಎರಡು ಬಣಗಳು ಸೃಷ್ಟಿಯಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ತೀವ್ರ ಪೈಪೋಟಿ ಶುರುವಾಗಿದೆ. ಹೀಗಾಗಿ ಪುರಸಭೆ ಚುನಾವಣೆ ಗೋಜಲದ ಗೂಡಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಶಿವಲೀಲಾ ಬುಟಾಳೆ, ವಿದ್ಯಾ ಐಹೊಳೆ ಹಾಗೂ ಶಾಂತಾ ಲೋನಾರೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.
ಬಣದೊಳಗೇ ಮೂಡದ ಸಹಮತ: ಮೂಲ ಕಾಂಗ್ರೆಸ್ ಪಕ್ಷದ ಒಟ್ಟು 15 ಜನ ಅಭ್ಯರ್ಥಿಗಳು ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸಿದ್ದರೂ ಅಧ್ಯಕ್ಷರ ಆಯ್ಕೆಗೆ ಸಬಂಧಿಸಿ ಸಹಮತ ಮೂಡದೇ ಅವರಲ್ಲೇ ಎರಡು ಗುಂಪುಗಳಾಗಿವೆ ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಒಂದು ಗುಂಪಿನವರು ಇನ್ನೊಂದು ಗುಂಪಿನವರನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಊಹಾಪೋಗಳು ಹರಿದಾಡುತ್ತಿವೆ.
ಒಟ್ಟಾರೆ ವಿಪಕ್ಷ ಇಲ್ಲದ ರಾಜ್ಯ ಏಕೈಕ ಪುರಸಭೆ ಎಂದ ಅಭಿದಾನಕ್ಕೆ ಪಾತ್ರವಾಗಿರುವ ಅಥಣಿ ಪುರಸಭೆಯಲ್ಲಿ ಆಂತರಿಕ ಬೇಗುದಿ ಹೆಚ್ಚಾಗಿದ್ದು, ಎರಡೂ ಬಣಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕುದುರೆ ವ್ಯಾಪಾರವೂ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.