ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿಯಲ್ಲಿ ಗುರುವಾರ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾಯಂದಿರು ತಮ್ಮ ಮಕ್ಕಳ ಹಣೆಗೆ ತಿಲಕವಿಟ್ಟು ಹೋರಾಟಕ್ಕೆ ಕಳುಹಿಸಿದ್ದಾರೆ. ಕಾರ್ಯಕರ್ತರು ಬಿಸಿಲನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ್ದಾರೆ. ಅವರ ಪರಿಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದರು.
ಪಾದಯಾತ್ರೆಯ ಪ್ರತಿಯೊಂದು ಹೆಜ್ಜೆಯೂ ಕಾಂಗ್ರೆಸ್ ಸರ್ಕಾರವನ್ನು ಬಡಿದೆಬ್ಬಿಸಿದೆ. ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣ ಜನರ ಮುಂದೆ ಬಯಲು ಮಾಡಲು ಬಿಜೆಪಿ ಶಕ್ತಿ ಮೀರಿ ಹೋರಾಟ ನಡೆಸಲಿದೆ. ಜನವಿರೋಧಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆದು ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ರೈತರಿಗಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ₹6 ಸಾವಿರ ಜೊತೆಗೆ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿದ್ದ ₹4 ಸಾವಿರವನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಬಡ ಹೆಣ್ಣುಮಕ್ಕಳಿಗೆ ನೆರವಾಗುತ್ತಿದ್ದ ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಲಾಗಿದೆ. ಇಂತಹ ಲೂಟಿಕೋರ ಸರ್ಕಾರ ರಾಜ್ಯದ ಜನ ನೋಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ. ಬಿಜೆಪಿ ಕಾರ್ಯಕರ್ತರ ಸಂಘಟಿತ ಹೋರಾಟದ ಮೂಲಕ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವ ಗುರಿಯೊಂದಿಗೆ ಪಕ್ಷ ಮುನ್ನಡೆಯಲಿದೆ ಎಂದು ಯಡಿಯೂರಪ್ಪ ಹೇಳಿದರು.ಸಮಾರೋಪಕ್ಕೂ ಮುನ್ನ ಬಿವೈವಿ ಟೆಂಪಲ್ ರನ್:
ಗಣಿನಾಡು ಬಳ್ಳಾರಿಯಲ್ಲಿ ಗುರುವಾರ ಎಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದರೆ, ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಓಡಾಟ ಹೆಚ್ಚಾಗಿತ್ತು. ಎಲ್ಲೆಲ್ಲೂ ಬಳ್ಳಾರಿ ಚಲೋದ ಮಾತು, ಸಮಾರೋಪ ಸಮಾರಂಭದ ಸಿದ್ಧತೆ ಹಾಗೂ ಪಕ್ಷದ ನಾಯಕರ ಆಗಮನದ ಚರ್ಚೆಯೇ ಕೇಳಿ ಬರುತ್ತಿತ್ತು.ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಗಣಿ ಜಿಲ್ಲೆಯ ವಿವಿಧ ತಾಲೂಕುಗಳು, ನೆರೆಯ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರು. ಇದರಿಂದ ಇಡೀ ಬಳ್ಳಾರಿ ನಗರವೇ ಒಂದು ರೀತಿಯಲ್ಲಿ ಕೇಸರಿಮಯವಾಗಿ ಕಂಡು ಬಂದಿತು.ಬೆಳಗ್ಗೆಯಿಂದಲೇ ವಿವಿಧೆಡೆಯಿಂದ ವಾಹನಗಳಲ್ಲಿ ಆಗಮಿಸುತ್ತಿದ್ದ ಕಾರ್ಯಕರ್ತರ ದಂಡು, ನಗರದ ಪ್ರಮುಖ ರಸ್ತೆಗಳಲ್ಲಿ ಕಾಣಿಸಿಕೊಂಡಿತು. ಕಾರು, ಬಸ್, ಟೆಂಪೊ, ಜೀಪ್ ಸೇರಿದಂತೆ ವಿವಿಧ ವಾಹನಗಳಲ್ಲಿ ಪಕ್ಷದ ಧ್ವಜ ಕಟ್ಟಿಕೊಂಡು ಕಾರ್ಯಕರ್ತರು ನಗರಕ್ಕೆ ಪ್ರವೇಶಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನಗಳ ಮೇಲೆ ಹಾರಾಡುತ್ತಿದ್ದ ಕೇಸರಿ ಧ್ವಜಗಳು ಬಳ್ಳಾರಿ ಚಲೋ ಹೋರಾಟದ ಸಮಾರೋಪಕ್ಕೆ ವಿಶೇಷ ಮೆರುಗು ನೀಡಿದವು.ತುಂಬಿ ತುಳುಕಿದ ವಸತಿ ತಾಣಗಳು:ಹೊರ ಜಿಲ್ಲೆಗಳ ಪಕ್ಷದ ಪ್ರಮುಖ ಮುಖಂಡರು, ಶಾಸಕರು ಹಾಗೂ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಬುಧವಾರ ರಾತ್ರಿಯೇ ಬಳ್ಳಾರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ನಗರದ ಬಹುತೇಕ ಲಾಡ್ಜ್‌ಗಳು ಹಾಗೂ ಇತರ ವಸತಿ ತಾಣಗಳು ಭರ್ತಿಯಾಗಿದ್ದವು. ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ವಾಸ್ತವ್ಯಕ್ಕೆ ಮುಂಗಡ ವ್ಯವಸ್ಥೆ ಮಾಡಿಕೊಂಡಿದ್ದರು.ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬಳ್ಳಾರಿಗೆ ಆಗಮಿಸಿದ್ದರಿಂದ ನಗರದ ವಾಣಿಜ್ಯ ಚಟುವಟಿಕೆಗಳಿಗೂ ಚುರುಕು ದೊರೆಯಿತು. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು, ಹೋಟೆಲ್‌ಗಳು, ಖಾನಾವಳಿಗಳು ಹಾಗೂ ಉಪಾಹಾರ ಗೃಹಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.ಕನಕದುರ್ಗಮ್ಮ ಸನ್ನಿಧಿಯಲ್ಲಿ ಕೇಸರಿ ದಂಡು:ಬಳ್ಳಾರಿಗೆ ಆಗಮಿಸಿದ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಅಧಿದೇವತೆ ಶ್ರೀಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಓಡಾಟ ಹೆಚ್ಚಾಗಿತ್ತು. ಗುಂಪು ಗುಂಪಾಗಿ ಆಗಮಿಸಿದ ಕಾರ್ಯಕರ್ತರು ದೇವಿಯ ದರ್ಶನ ಪಡೆದು ಬಳಿಕ ಸಮಾರೋಪ ಸಮಾರಂಭದತ್ತ ತೆರಳಿದರು.
ಬಳ್ಳಾರಿ ಚಲೋದ 10ನೇ ದಿನವಾದ ಗುರುವಾರ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸುಮಾರು 2 ಕಿ.ಮೀ. ದೂರ ಪಾದಯಾತ್ರೆ ನಡೆಸಿದರು. ಪಾದಯಾತ್ರೆ ಮೂಲಕವೇ ಸಮಾರೋಪದ ವೇದಿಕೆಗೆ ಆಗಮಿಸಿದರು. ಸಮಾರೋಪಕ್ಕೂ ಮುನ್ನ, ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆ ಆರಂಭಿಸಿದರು. ವೈಟ್ ಶರ್ಟ್, ಪಂಚೆಯುಟ್ಟು, ಹೆಗಲ ಮೇಲೆ ಹಸಿರು ಶಾಲು ಹಾಕಿ ಪಾದಯಾತ್ರೆಯಲ್ಲಿ ಸಾಗಿದರು. ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಹಸಿರು ಶಾಲನ್ನು ಬೀಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ, ಎರಡು ಜೆಸಿಬಿ ಮೂಲಕ ಅಭಿಮಾನಿಗಳು ವಿಜಯೇಂದ್ರಗೆ ಹಾರ ಹಾಕಿ ಸಂಭ್ರಮಿಸಿದರು.ಬಳಿಕ, ಪಾದಯಾತ್ರೆ ಬಳ್ಳಾರಿ ದುರ್ಗಮ್ಮ ಸರ್ಕಲ್‌ಗೆ ಆಗಮಿಸಿತು. ಅಲ್ಲಿಯೂ ಯಾತ್ರೆಗೆ ಭರ್ಜರಿ ಸ್ವಾಗತ ದೊರೆಯಿತು. ಅಲ್ಲಿಂದ ಯಾತ್ರೆ ರಾಯಲ್ ವೃತ್ತ ತಲುಪಿತು. ಅಲ್ಲಿ ಡ್ರೋನ್ ಮೂಲಕ ವಿಜಯೇಂದ್ರಗೆ ಅಭಿಮಾನಿಗಳು ಪುಷ್ಪ ಮಳೆ ಸುರಿಸಿದರು. ಅಲ್ಲಿಂದ ಪಾದಯಾತ್ರೆ ಸಮಾರೋಪ ಸಮಾರಂಭದ ವೇದಿಕೆಗೆ ಆಗಮಿಸಿತು.