ಹೆಲ್ಮೆಟ್ ಧರಿಸದ ಸವಾರರಿಗೆ ದಂಡ, ಉಚಿತ ಹೆಲ್ಮೆಟ್‌

KannadaprabhaNewsNetwork | Published : Jan 21, 2025 12:33 AM

ಸಾರಾಂಶ

ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ. ಎಲ್ಲರೂ ಕಾನೂನು ಅರಿತು ಪಾಲಿಸಿದರೆ ಅಪಘಾತ, ಅಪರಾಧ ನಡೆಯುವುದಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಸ್ತೆ ಸುರಕ್ಷತಾ ಸಪ್ತಾಹ ಹಾಗು ಹೆಲ್ಮೆಟ್ ಕಡ್ಡಾಯ ಧರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ನೇತೃತ್ವದಲ್ಲಿ ಬೈಕ್ ಜಾಥಾ ನಡೆಸಿ, ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿ ದಾನಿಗಳ ನೆರವಿನೊಂದಿಗೆ ಉಚಿತ ಹೆಲ್ಮೆಟ್ ವಿತರಿಸಿದರು. ಪೋಲಿಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಸಪ್ತಾಹದ ಮುಖ್ಯ ಉದ್ದೇಶ ಎಂದರು.

ಇದು ಪ್ರೋತ್ಸಾಹ ಕ್ರಮವಲ್ಲ. ಕಾನೂನನ್ನು ಬೇರೆ ರೀತಿ ಪರಿಚಯಿಸುವ ಯತ್ನ ಇದಾಗಿದೆ. ಎಲ್ಲರೂ ಕಾನೂನು ಅರಿತು ನಿಯಮ ಉಲ್ಲಂಘಿಸದೆ ಕಾನೂನು ಪಾಲಿಸಿದರೆ ಯಾವ ಅಪಘಾತವಾಗಲಿ, ಅಪರಾಧಗಳಾಗಲಿ ಆಗುವುದಿಲ್ಲಾ. ಆದುದರಿಂದ ಕಾನೂನು ಪಾಲನೆ ಮಾಡಿ ಎಂದು ಹೇಳಿದರು. ಹಲ್ಮೆಟ್‌ಗಾಗಿ ನಿಯಮ ಉಲ್ಲಂಘನೆ

ಯಾವಾಗ ಪೊಲೀಸರು ಉಚಿತವಾಗಿ ಹೆಲ್ಮೆಟ್‌ ನೀಡುತ್ತಿದ್ದಾರೆ ಎಂಬ ವಿಷಯ ಹರಡಿತೋ, ಕೆಲ ಸಾರ್ವಜನಿಕರು ತಮ್ಮ ಬಳಿ ಹೆಲ್ಮೆಟ್‌ ಇದ್ದರೂ ಅದನ್ನು ಬಚ್ಚಿಟ್ಟು, ತಾವೇ ಪೊಲೀಸರು ತಪಾಸಣೆ ನಡೆಸುವ ಸ್ಥಳದ ಕಡೆ ಬರಲು ಆರಂಭಿಸಿದರು. ಈ ವೇಳೆ ಹೆಲ್ಮೆಟ್‌ ಧರಿಸದೇ ಬಂದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಅಷ್ಟಕ್ಕೆ ಸುಮ್ಮನಾಗದ ವಾಹನ ಸವಾರರು ಸಾರ್‌ ಹೆಲ್ಮೆಟ್‌ ಎಲ್ಲಿ ಎಂದು ಕೇಳಿದರು. ಅಷ್ಟೊತ್ತಿಗೆ ಪೊಲೀಸರು ಆಫರ್‌ ಮುಗಿದಿದೆ ಎಂದರು. ಹೆಲ್ಮೆಟ್‌ ಸಿಗಲಿದೆ ಎಂದು 500 ರು. ದಂಡ ಕಟ್ಟಿದ ಸವಾರರು ಹೆಲ್ಮೆಟ್‌ ಸಿಗದೇ ಪೆಚ್ಚುಮೊರೆ ಹಾಕಿಕೊಂಡು ಹಿಂದಿರುಗಿದರು.

ಈ ವೇಳೆ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ರಾಜಾ ಇಮಾಮ್ ಕಾಸಿಂ,ಡಿವೈಎಸ್ ಪಿ ಎಸ್.ಶಿವಕುಮಾರ್, ದಾನಿಗಳಾದ ಮಂಚನಬಲೆ ಗ್ರಾಮಪಂಚಾಯತಿ ಅಧ್ಯಕ್ಷ ಸಿ.ಮಧು, ಹರೀಶ್, ವೆಂಕಟ್, ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಮೀಸಲು ಪಡೆ ಇನ್ಸ್ ಪೆಕ್ಟರ್ ಮಹದೇವ್, ಸಂಚಾರಿ ಪೋಲಿಸ್ ಠಾಣೆಯ ಪಿಎಸ್ ಐ ಎಸ್.ಆರ್.ಮಂಜುಳಾ, ಪಿಎಸ್ ಐಗಳಾದ ಅಮರ್ ಮೊಗಳೆ,ಹರೀಶ್,ರತ್ನಾಬಾಯಿ,ಶ್ರೀಧರ್, ಎಎಸ್ಐ ವೆಂಕಟೇಶ್ ಮತ್ತು ಇತರೆ ಸಿಬ್ಬಂದಿ ಇದ್ದರು.

Share this article