ಹಿರೇಕೆರೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ, ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಜನತೆಗೆ ನೆಮ್ಮದಿ ಬದುಕು ನೀಡುವ ಕಾರ್ಯ ಮಾಡಿದೆ. ನೂತನ ಸಿಎಂ ಡಿ.ಕೆ. ಶಿವಕುಮಾರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ವಾಯುವ್ಯ ಸಾರಿಗೆ ಘಟಕದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. 2013ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಪ್ರತಿ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಕಾರ್ಯ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಟ್ಟು ಜನಮಾನಸದಲ್ಲಿ ಉಳಿಯುಂತಹ ಕಾರ್ಯ ಮಾಡಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ವಿದ್ಯಾನಿಧಿ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ರು. 52 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಿ ರಾಜ್ಯದ ಜನೆತೆಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡಿದೆ ಎಂದರು.ಶಕ್ತಿ ಯೋಜನೆಯಿಂದ ಹಿರೇಕೆರೂರ ಘಟಕದಿಂದ ₹ 100 ಕೋಟಿ ವ್ಯಯ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಯೋಜನೆಯಿಂದ ನಮ್ಮ ಕ್ಷೇತ್ರದ 6 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷದಲ್ಲಿ ತಾಲೂಕಿನ ಇತಿಹಾಸದಲ್ಲಿ ಹಿರೇಕೆರೂರು ಘಟಕಕ್ಕೆ 21 ಹೊಸ ಬಸ್ಸುಗಳ ಲೋಕಾರ್ಪಣೆ ಮಾಡಲಾಗಿದೆ. 25 ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಜೊತೆ ಚರ್ಚಿಸಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಘಟಕವನ್ನು ಮಾಡಿ ಉತ್ತಮ ಎರಡು ಘಟಕ ಮಾಡಿ ಸಾರಿಗೆ ವ್ಯವಸ್ಥೆಗೆ ಇನ್ನೂ ಉತ್ತಮವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.