ಇತ್ತೀಚೆಗೆ ಕಪ್ಪೆಚಿಪ್ಪು ತೆಗೆಯಲು ಹೋಗಿ ನೀರಿನಲ್ಲಿ ಮುಳಿಗಿ ಮೃತಪಟ್ಟ ೧೧ ಜನರ ಮನೆಗೆ ಸೋಮವಾರ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ ನಾಮಧಾರಿ ಸಮಾಜದ ಕುಲಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಕುಟುಂಬಕ್ಕೆ ಸಾಂತ್ವನ, ಧನ ಸಹಾಯ । ಸಂತ್ರಸ್ತರಿಗೆ ಸಹಾಯ ಮಾಡಲು ಸಮಾಜದವರಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಇತ್ತೀಚೆಗೆ ಕಪ್ಪೆಚಿಪ್ಪು ತೆಗೆಯಲು ಹೋಗಿ ನೀರಿನಲ್ಲಿ ಮುಳಿಗಿ ಮೃತಪಟ್ಟ ೧೧ ಜನರ ಮನೆಗೆ ಸೋಮವಾರ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ ನಾಮಧಾರಿ ಸಮಾಜದ ಕುಲಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಅವರು ಮಾತನಾಡಿ, ಇದೊಂದು ಘೋರ ದುರಂತವಾಗಿದೆ. ಯಾವ ಕುಟುಂಬದವರಿಗೂ ಇಂತಹ ಪರಿಸ್ಥಿತಿ ಬರಬಾರದು, ಬಂದಾಗ ನೊಂದವರೊಂದಿಗೆ ಸಮಾಜದವರು ಇರಬೇಕು ಎಂದರಲ್ಲದೇ, ದುರಂತದ ದಿನ ನಾನು ಅಯೋಧ್ಯೆಯಲಿದ್ದ ಕಾರಣ ತಕ್ಷಣ ಬರಲು ಆಗಲಿಲ್ಲ. ಸಚಿವ ಮಂಕಾಳ ವೈದ್ಯರು ಸರಕಾರದಿಂದ ಇನ್ನೂ ಹೆಚ್ಚಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಕುಟುಂಬದವರನ್ನು ಪೋಷಣೆ ಮಾಡುವ ಕೆಲಸ ಮಠ ಹಾಗೂ ಸಮಾಜ ಮಾಡುತ್ತದೆ ಎಂದರು.

ಸಮಾಜದ ಪ್ರತಿಯೊಬ್ಬರು ಸಂತಸ್ತರ ಕುಟುಂಬದವರಿಗೆ ಸಹಾಯ ಮಾಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಮಠವು ಅನುಕೂಲ ಮಾಡಿಕೊಡಲಿದೆ ಎಂದರು.

ಈ ಸಂದರ್ಭ ಮಠದ ಪರವಾಗಿ ಸ್ವಾಮಿಗಳು ಪ್ರತಿ ಕುಟುಂಬದವರಿಗೆ ಧನಸಹಾಯ ನೀಡಿದರು.

ಮೃತ ಕುಟುಂಬದವರ ಮಕ್ಕಳಿಗೆ ಉದ್ಯೋಗ ನೀಡಲು ಸ್ಥಳೀಯ ಬ್ಯಾಂಕುಗಳ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿ ಉದ್ಯೋಗ ನೀಡುವಂತೆ ತಿಳಿಸಿದರು.

ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷ ನಾಗೇಂದ್ರ ನಾಯ್ಕ, ಸಾರದಹೊಳೆ ಹಳೆಕೊಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಪ್ರಮುಖರಾದ ಕೃಷ್ಣ ನಾಯ್ಕ ಪೃಥ್ವಿ, ಡಿ.ಎಲ್. ನಾಯ್ಕ, ಕೆ.ಆರ್. ನಾಯ್ಕ ಎಸ್.ಎಂ. ನಾಯ್ಕ, ಡಿ.ಬಿ. ನಾಯ್ಕ, ವಿಠ್ಠಲ್ ನಾಯ್ಕ, ಶ್ರೀಧರ ನಾಯ್ಕ, ಎಚ್.ಆರ್. ನಾಯ್ಕ, ಕುಮಟಾ, ವಾಮನ ನಾಯ್ಕ ಹೊನ್ನಾವರ, ಕೃಷ್ಣ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಪ್ರಮುಖರು ಹಾಗೂ ಶ್ರೀರಾಮ ಕ್ಷೇತ್ರ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.