ಅಮಕುಂದಿ ಗ್ರಾಮದಲ್ಲಿ ನೊಣಗಳ ಕಾಟ

KannadaprabhaNewsNetwork |  
Published : Oct 31, 2024, 02:05 AM IST
ಚಿತ್ರ ಶೀರ್ಷಿಕೆ 30ಎಂ ಎಲ್ ಕೆ1ಮೊಳಕಾಲ್ಮುರು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ನೊಣಗಳು ವ್ಯಕ್ತಿಯೊಬ್ಬರಿಗೆ ಮುತ್ತಿ ಕೊಂಡಿರುವುದು.ಚಿತ್ರ ಶೀರ್ಷಿಕೆ 30ಎಂ ಎಲ್ ಕೆ2ಮೊಳಕಾಲ್ಮುರು ತಾಲೂಕಿನ ಅಮಕುಂದಿಯಲ್ಲಿ ನೊಣಗಳು ಅಡುಗೆ ಮನೆಯಲ್ಲಿ ಮುತ್ತಿಕೊಂಡಿರುವುದು.ಚಿತ್ರ ಶೀರ್ಷಿಕೆ 30ಎಂ ಎಲ್ ಕೆ3ಮೊಳಕಾಲ್ಮುರು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ನೊಣಗಳ ಕಾಟದಿಂದ ಅಡುಗೆ ಸಮಾನುಗಳಿಗೆ ಬಟ್ಟೆಯಿಂದ ರಕ್ಷಣೆ ಮಾಡಿರುವುದು. | Kannada Prabha

ಸಾರಾಂಶ

ಅಡುಗೆ ಮಾಡಾಂಗಿಲ್ಲ, ಮುದ್ದೆ ಉಣ್ಣಂಗಿಲ್ಲ, ಕುಂತ್ಕಳ್ಳಂಗಿಲ್ಲಾ, ನಿಂತ್ಕಳ್ಳಂಗಿಲ್ಲ, ನಿದ್ದೆಯಂತೂ ಇಲ್ವೇ ಇಲ್ಲಾ. ನಮ್ಮಕಷ್ಟ ಕೇಳೋರೆ ಇಲ್ದೆಂಗೆ ಆಗಿದೆ. ಇವು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ಉಲ್ಬಣಗೊಂಡಿರುವ ನೊಣಗಳ ಹಾವಳಿಗೆ ಬೇಸೆತ್ತ ಜನತೆಯಿಂದ ಕೇಳಿಬಂದ ನೋವುಗಳು.

ಬಿ.ಜಿ.ಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಅಡುಗೆ ಮಾಡಾಂಗಿಲ್ಲ, ಮುದ್ದೆ ಉಣ್ಣಂಗಿಲ್ಲ, ಕುಂತ್ಕಳ್ಳಂಗಿಲ್ಲಾ, ನಿಂತ್ಕಳ್ಳಂಗಿಲ್ಲ, ನಿದ್ದೆಯಂತೂ ಇಲ್ವೇ ಇಲ್ಲಾ. ನಮ್ಮಕಷ್ಟ ಕೇಳೋರೆ ಇಲ್ದೆಂಗೆ ಆಗಿದೆ. ಇವು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ಉಲ್ಬಣಗೊಂಡಿರುವ ನೊಣಗಳ ಹಾವಳಿಗೆ ಬೇಸೆತ್ತ ಜನತೆಯಿಂದ ಕೇಳಿಬಂದ ನೋವುಗಳು.

ಹೌದು ತಾಲೂಕಿನ ಅಮಕುಂದಿ ಗ್ರಾಮದಲ್ಲಿ ನೊಣಗಳ ಕಾಟಕ್ಕೆ ಇಡೀ ಊರಿಗೆ ಊರೇ ಬೆಚ್ಚಿ ಬೀಳುವಂತಾಗಿದೆ. ಎಲ್ಲಿ ನೋಡಿದರೂ ಭಾರಿ ಸಂಖ್ಯೆಯ ನೊಣಗಳು ಕಾಣಸಿಗುತ್ತಿದ್ದು, ಜನತೆ ಬೀಸತ್ತಿದ್ದಾರೆ. ಊಟ ಮಾಡಲು ಕೂಡ ಕಷ್ಟ ಪಡುವಂತಾಗಿದೆ. ಗ್ರಾಮದ ಸಮೀಪ ದೂರದಲ್ಲಿ ತಲೆ ಎತ್ತಿರುವ ಕೋಳಿ ಫಾರಂ ಸಮರ್ಪಕ ನಿರ್ವಹಣೆ ಇಲ್ಲದಿರುವುದೇ ನೊಣಗಳ ಉತ್ಪತ್ತಿಗೆ ಪ್ರಮುಖ ಕಾರಣ ಎನ್ನಲಾಗಿದೆ.ಕೊರೊನಾ ವೈರಸ್‌ ಭೀತಿ ಮರೆಯಾಗುತ್ತಿರುವ ಬೆನ್ನಲ್ಲೆ ಈ ಗ್ರಾಮಸ್ಥರಿಗೆ ಈಗ ನೊಣಗಳ ಕಾಟದಿಂದ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿದೆ. ಕಳೆದೆರಡು ವರ್ಷಗಳಿಂದ ನೊಣಗಳ ಕಾಟಕ ಜನರ ಬದುಕನ್ನು ಹೈರಾಣಾಗಿಸಿದೆ.

ಊಟಕ್ಕೆ ಕುಳಿತರೆ ತಟ್ಟೆಗೆ ಬೀಳುತ್ತಿವೆ. ಟೀ ಕುಡಿಯಲೆಂದರೆ ಲೋಟಕ್ಕೆ ಮುತ್ತಿಕೊಳ್ಳುತ್ತಿವೆ. ಮಲಗಿದರೆ ಬಾಯಿಗೆ, ಮೂಗಿಗೆ ಮುತ್ತಿಕೊಳ್ಳುತ್ತಿರುವ ಪರಿಣಾಮವಾಗಿ ನಿದ್ದೆಯೇ ಮಾಡದಂತ ಸ್ಥಿತಿ ಎದುರಾಗಿದೆ. ಅಡುಗೆ ಮನೆ, ರಸ್ತೆ, ಚರಂಡಿ ಮನೆಯ ವರಾಂಡ ಸೇರಿದಂತೆ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತವೆ. ಸೊಳ್ಳೆ ಪರದೆಗಳಲ್ಲಿ ಊಟ ಮಾಡುವಂತಾಗಿದೆ. ನಮ್ಮ ಮನೆಗೆ ಸಂಬಂಧಿಕರು ಬಾರದಂತಾಗಿದೆ ಎನ್ನುತ್ತಾರೆ ಗ್ರಾಮದ ನಿವಾಸಿ ರತ್ನಮ್ಮ.

500ಕ್ಕೂ ಹೆಚ್ಚಿನ ಮನೆಗಳು ಇರುವ ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ನೊಣಗಳ ಕಾಟದಿಂದ ಇಡೀ ಗ್ರಾಮವೇ ಪರಿತಪಿಸುವಂತಾಗಿದೆ. ಅಂಗನವಾಡಿ ಮತ್ತು ಶಾಲೆಯ ಬಿಸಿಯೂಟಕ್ಕೂ ನೊಣಗಳ ದಾಂಗುಡಿ ಇಡುತ್ತಿವೆ. ಎಷ್ಟು ಸ್ವಚ್ಛ ಮಾಡಿದರೂ, ನೊಣಗಳ ಕಾಟ ತಪ್ಪುತ್ತಿಲ್ಲ. ದಿನಕ್ಕೆ ಮೂರ್ನಾಕು ಬಾರಿ ನೆಲವನ್ನು ಸ್ವಚ್ಛ ಗೊಳಿಸುತ್ತಿದ್ದೇವೆ. ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಭೀತಿ ಆವರಿಸಿದೆ. ಈ ಸಂಬಂಧವಾಗಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎನ್ನುವುದು ಅಂಗನವಾಡಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಮನೆ, ಚಹಾ ಅಂಗಡಿ, ದೇವಸ್ಥಾನ ಸೇರಿದಂತೆ ಎಲ್ಲೆಂದರಲ್ಲಿ ನೊಣಗಳು ಕಾಣುತ್ತಿವೆ. ಜಾನುವಾರುಗಳ ಮೇಲೆಯೂ ನೊಣಗಳು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಮನೆಯ ಗೋಡೆ, ವಾಹನ, ಬಟ್ಟೆ, ಮೇಲೆ, ಮನೆಯ ಅಂಗಳದಲ್ಲಿ ಹೆಚ್ಚಾಗಿದ್ದು, ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ನೊಣಗಳಿಂದ ತಪ್ಪಿಸಿಕೊಳ್ಳುವುದು ನಮಗೆ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಗ್ರಾಮದ ಮಹಿಳೆ ಮಲಿಯಮ್ಮ.ಗ್ರಾಮದ ಸಮೀಪದ ಕೋಳಿ ಫಾರಂನಿಂದ ನೊಣಗಳು ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದು, ಅಸಮರ್ಪಕ ನಿರ್ವಹಣೆಯಿಂದ ನೊಣಗಳು ಹೆಚ್ಚಾಗಿವೆ. ಸಮಸ್ಯೆಯ ಬಗ್ಗೆ ಪಂಚಾಯ್ತಿಯವರು ಕಣ್ಣಾರೆ ಕಂಡರೂ, ಕ್ರಮಕೈಗೊಳ್ಳಲು ಮುಂದಾಗಿಲ್ಲ ಎನ್ನುವುದು ಜನತೆಯ ಆರೋಪವಾಗಿದೆ. ಇನ್ನಾದರೂ ಗ್ರಾಮದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣ ವಾಗುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ನೊಣಗಳ ಹಾವಳಿಗೆ ಕಡಿವಾಣ ಹಾಕಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.ನೊಣಗಳ ಹಾವಳಿಗೆ ಭಾರಿ ನೋವು ಪಡುವಂತಾಗಿದೆ. ಅಡುಗೆ ಮಾಡಲು ಪ್ರಯಾಸ ಪಡುವಂತಾಗಿದೆ. ಹಸಿವು ಎಂದು ತಿನ್ನಲು ಹೋದರೆ ತಟ್ಟೆಯ ಮೇಲೆ ನೊಣದ ರಾಶಿ ಮುತ್ತಿಕೊಳ್ಳುತ್ತಿವೆ. ಸಣ್ಣ ಮಕ್ಕಳಿಗೂ ಊಟ ಮಾಡಿಸಲು ಸಾಧ್ಯವಾಗುತ್ತಿಲ್ಲ. ಮಲಗಲು ಹೋದರೆ ಕಿವಿಯಲ್ಲಿ ಗುಯ್‌ ಗುಡುತ್ತವೆ ಸಂಬಂಧಿಸಿದವರು ಇತ್ತ ಗಮನ ಹರಿಸಬೇಕು.

- ವಸಂತಮ್ಮ. ಗ್ರಾಮದ ನಿವಾಸಿ.ಬಾರಿ ಪ್ರಮಾಣದಲ್ಲಿ ತುಂಬಿರುವ ನೊಣಗಳಿಂದಾಗಿ ಜೀವನವೇ ಬೇಸೆತ್ತಿದೆ. ಸಣ್ಣ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದೆ. ಹಗಲು ರಾತ್ರಿ ಊರಲ್ಲಿ ಇರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯ್ತಿಗೆ ಮನವಿ ನೀಡಿ ಸಾಕಾಗಿದೆ. ಈಗಲಾದರೂ ನೊಣಗಳ ಹಾವಳಿಯನ್ನು ನಿಯಂತ್ರಿಸಬೇಕು.

- ಅಂಜಿನಪ್ಪ. ಗ್ರಾಮಸ್ಥಅಮಕುಂದಿ ಗ್ರಾಮದಲ್ಲಿ ಹೆಚ್ಚಾಗಿರುವ ನೊಣಗಳ ಹಾವಳಿ ಕುರಿತು ದೂರುಗಳು ಬಂದಿವೆ. ಕೂಡಲೇ ಅಲ್ಲಿನ ಕೋಳಿ ಫಾರಂ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತೇನೆ. ಗ್ರಾಮದಲ್ಲಿ ಬ್ಲೀಚಿಂಗ್ ಪಿನಾಯಿಲ್ ಹಾಕಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇನೆ.

- ಪಾಪನಾಯಕ, ಚಿಕ್ಕೇರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ