ಅಡಕೆ ಜತೆ ಪರ್ಯಾಯ ಬೆಳೆಯತ್ತ ಗಮನ ಹರಿಸಿ: ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ

KannadaprabhaNewsNetwork |  
Published : Jul 25, 2025, 12:35 AM IST
ಫೋಟೋ ಜು.೨೪ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ನಾಡಿನಾದ್ಯಂತ ಅಡಕೆ ಬೆಳೆಯುತ್ತಿರುವುದನ್ನು ಗಮನಿಸಿದರೆ ಕೆಲವು ವರ್ಷಗಳಲ್ಲಿ ಅಡಕೆ ದರ ₹20 ಸಾವಿರಕ್ಕೆ ಬಂದರೂ ಅಚ್ಚರಿಯಿಲ್ಲ.

ಯಲ್ಲಾಪುರ: ನಾಡಿನಾದ್ಯಂತ ಅಡಕೆ ಬೆಳೆಯುತ್ತಿರುವುದನ್ನು ಗಮನಿಸಿದರೆ ಕೆಲವು ವರ್ಷಗಳಲ್ಲಿ ಅಡಕೆ ದರ ₹20 ಸಾವಿರಕ್ಕೆ ಬಂದರೂ ಅಚ್ಚರಿಯಿಲ್ಲ. ಆಧುನಿಕ ಕೃಷಿಯ ಬಗ್ಗೆ ಗಮನ ಹರಿಸಬೇಕು ಎಂದು ಟಿಎಂಎಸ್‌ನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಪಟ್ಟಣದ ಟಿಎಂಎಸ್ ಆವಾರದಲ್ಲಿ ಗುರುವಾರ ನಡೆದ ೬೦ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪರ್ಯಾಯ ಬೆಳೆಗಳಾದ ಕೋಕೊ, ಕಾಳುಮೆಣಸು, ಏಲಕ್ಕಿ, ಲವಂಗ, ಜಾಯಿಕಾಯಿ, ಕಾಫಿ ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆಯುವುದಕ್ಕೆ ಮುಂದಾಗದಿದ್ದರೆ ನಮ್ಮ ರೈತರು ತೊಂದರೆಯಲ್ಲಿ ಸಿಲುಕುವ ಆತಂಕ ಕಾಣುತ್ತಿದೆ ಎಂದರು.

ನಮ್ಮ ರೈತರು ತಮ್ಮ ಆದಾಯಕ್ಕಿಂತಲೂ ಹೆಚ್ಚಿನ ಸಾಲ ಪಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದು ಮುಂದೊಂದು ದಿನ ಬಹುದೊಡ್ಡ ಆಪತ್ತಿಗೆ ಕಾರಣವಾದೀತು. ನಮ್ಮ ಅನೇಕ ರೈತರ ತೋಟಗಳನ್ನು ವೀಕ್ಷಿಸಿದ್ದೇನೆ. ಸಮರ್ಪಕವಾಗಿ ತೋಟದ ಬಗ್ಗೆ ನಮ್ಮ ಎಲ್ಲ ರೈತರು ನಿಗಾ ವಹಿಸದಿರುವುದು ಸರಿಯಲ್ಲ. ಆ ಹಿನ್ನೆಲೆಯಲ್ಲಿ ಟಿಎಂಎಸ್ ನೇತೃತ್ವದಲ್ಲಿ ನಮ್ಮ ರೈತರ ಮನೆ ಮನೆಗೆ ಹೋಗಿ ಆಧುನಿಕ ಕೃಷಿಯ ಮತ್ತು ತಂತ್ರಜ್ಞಾನದ ಅರಿವನ್ನು ಮತ್ತು ಹೆಚ್ಚಿನ ಆದಾಯ ಬರುವ ಕುರಿತು ಅವರಿಗೆ ತಿಳಿವಳಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳುವ ಚಿಂತನೆ ಹೊಂದಿದ್ದೇನೆ ಎಂದರು.

ಅನೇಕ ರೈತರು, ಅಡಕೆ ವ್ಯಾಪಾರಸ್ಥರು, ಗ್ರಾಹಕರು ನಮ್ಮ ಮೇಲೆ ಇಟ್ಟ ವಿಶ್ವಾಸದಿಂದಾಗಿ ನಮ್ಮ ಸಂಸ್ಥೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದು, ಸಂಸ್ಥೆಯ ಇತಿಹಾಸದಲ್ಲೇ ಅತಿಹೆಚ್ಚಿನ ಲಾಭಾಂಶ ಹೊಂದಲು ಸಾಧ್ಯವಾಗಿದೆ. ನಮ್ಮ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ ಮುಂಡಗೋಡಿನಲ್ಲಿ ಶಾಖೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದರು.

ಪ್ರಸ್ತುತ ಪ್ರಧಾನಿ ಮತ್ತು ವಾಣಿಜ್ಯ ಸಚಿವರು ನಮ್ಮ ಬೇಡಿಕೆಯನ್ನು ಮನ್ನಿಸಿರುವುದರಿಂದ ಅಡಕೆ ದರ ಸ್ಥಿರವಾಗಿದೆ. ಆಕಸ್ಮಿಕ ರೈತರ ಹಿತವಿಲ್ಲದವರು ಅಧಿಕಾರಕ್ಕೆ ಬಂದರೆ ಮುಂದಿನ ಸ್ಥಿತಿ ಹೇಳಲಾಗದು. ರೈತರೂ ಬೆಳೆಯಬೇಕು. ಸಹಕಾರಿ ಸಂಘವೂ ಗಟ್ಟಿಯಾಗಬೇಕು. ಆ ನೆಲೆಯಲ್ಲಿ ಎಲ್ಲ ಸಹಕಾರಿಗಳು ಕೂಡ ಪಕ್ಷಾತೀತವಾಗಿ ಜಾತಿ, ಪಕ್ಷ, ರಾಜಕೀಯದಿಂದ ದೂರವಿದ್ದು, ಸಂಸ್ಥೆಯನ್ನು ಬೆಂಬಲಿಸಿದಾಗ ಸಂಸ್ಥೆಯೂ ಬೆಳೆಯಬಲ್ಲದು, ರೈತನೂ ಬೆಳೆಯುತ್ತಾನೆ ಎಂದರು.

ಹಲವು ಸದಸ್ಯರ ಬೇಡಿಕೆಗಳಂತೆ ಸಂಘ ನೀಡುವ ಸಾಲಕ್ಕೆ ಕನಿಷ್ಠ ೫೦ ಪೈಸೆಯನ್ನಾದರೂ ಬಡ್ಡಿ ಇಳಿಸುವಂತೆ ಒತ್ತಾಯ ಬಂದಾಗ ಆಡಳಿತ ಮಂಡಳಿ ಆ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಸಂಘದ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಭರವಸೆ ನೀಡಿದರು.

ಸಂಘದ ನಿರ್ದೇಶಕರಾಗಿದ್ದ ದಿ.ಟಿ.ಎನ್.ಭಟ್ಟ ನಡಿಗೆಮನೆ, ಮಾಜಿ ನಿರ್ದೇಶಕ ದಿ.ಓಂಕಾರ ಭಟ್ಟ ಕಿರುಕುಂಭತ್ತಿ ಮತ್ತು ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಿರ್ದೇಶಕರಾದ ಸುಬ್ರಾಯ ಭಟ್ಟ ಬೋಳ್ಮನೆ, ಶ್ರೀಪತಿ ಮುದ್ದೆಪಾಲ, ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ, ಸೌಮ್ಯಾ ಭಟ್ಟ ಕಿಚ್ಚುಪಾಲ, ಪಾರ್ವತಿ ಭಟ್ಟ, ಮಂಜುನಾಥ ಜಡ್ಡಿಗದ್ದೆ, ಸಾಲು ಸಿದ್ದಿ, ಗಣಪತಿ ಶೇಟ್, ರಾಜೇಂದ್ರ ಗೌಡ, ರವಿ ಭಟ್ಟ ಬಿಡಾರ, ಗಣಪತಿ ಹೆಗಡೆ, ನಾಗೇಂದ್ರ ಪತ್ರೇಕರ ಉಪಸ್ಥಿತರಿದ್ದರು.

ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಪ್ರಬಂಧಕ ವಿ.ಟಿ.ಹೆಗಡೆ ತೊಂಡೆಕೆರೆ ವರದಿ ವಾಚಿಸಿದರು. ಪ್ರಥಮ ದರ್ಜೆ ಸಹಾಯಕ ವಿನಾಯಕ ಮೆಣಸುಮನೆ ನಿರ್ವಹಿಸಿದರು. ನಿರ್ದೇಶಕ ವೆಂಕಟರಮಣ ಬೆಳ್ಳಿ ವಂದಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ