ಕನ್ನಡಪ್ರಭ ವಾರ್ತೆ ತುಮಕೂರು
ದಕ್ಷಿಣ ಭಾರತವು ಶೈಕ್ಷಣಿಕವಾಗಿ ಮುಂದಿರುವುದರಲ್ಲಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದವಿದೆ. ಅಕ್ಷರ ದಾಸೋಹ, ಅನ್ನದಾಸೋಹದ ಪರಿಕಲ್ಪನೆಯನ್ನು ನೀಡಿದ ಅವರ ಅನುಗ್ರಹದೊಂದಿಗೆ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬೆಳೆಸಿದ ಕೆ.ಬಿ.ಜಯಣ್ಣನವರ ಸಾಧನೆ ಅಭೂತಪೂರ್ವವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.ಅವರು ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಕೆ.ಬಿ.ಜಯಣ್ಣನವರ ಅಭಿನಂದನ ಸಮಾರಂಭದಲ್ಲಿ ಶಿಕ್ಷಣ ಶ್ರೀನಿಧಿ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
70 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿಕೊಂಡರೆ ನಮ್ಮ ದೇಶವು ಇಂದು ಆರ್ಥಿಕವಾಗಿ ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಪ್ರಪಂಚದ ನಾಲ್ಕನೇ ದೊಡ್ಡಶಕ್ತಿಯಾಗಿ ಭಾರತವು ಗುರುತಿಸಿಕೊಂಡಿದೆ. ನಮ್ಮ ನಾಡು ಅಭಿವೃದ್ಧಿಯಾಗುವುದರ ಹಿಂದೆ ಶಿಕ್ಷಣ ಕ್ಷೇತ್ರದ ಕೊಡುಗೆ ಅಪಾರ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ತುಮಕೂರಿಗೆ ಹೆಚ್ಚಿನಮಟ್ಟದ ಸೌಲಭ್ಯಗಳನ್ನು ಒದಗಿಸಿಕೊಡಲು ಅಗತ್ಯವಿರುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. 50 ಕೋಟಿಯ ಯೋಜನೆಯು ಇಂದು ಮೈಸೂರಿನಲ್ಲಿ ಪ್ರಾರಂಭಗೊಳ್ಳಲಿದೆ. ರಾಷ್ಟ್ರ. ಮಟ್ಟದಲ್ಲಿ ನಡೆಯುವ ಅಭಿವೃದ್ಧಿ ಯೋಜನೆಗಳ ಜತೆಯಲ್ಲಿ ಕೆ.ಬಿ.ಜಯಣ್ಣನವರಂಥ ಹಿರಿಯರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರ ನಡೆನುಡಿ ಎಲ್ಲರಿಗೂ ಆದರ್ಶವಾಗಲಿ ಎಂದರು.
ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಮಹಾಸ್ವಾಮಿಗಳು ಮಾತನಾಡಿ, ಜಯಣ್ಣನವರು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡವರು. ಅವರ ಶ್ರೀಮತಿ ಪೂರ್ಣಿಮಾ ಅವರು ಕೂಡಾ ಪತಿಯ ಸಾಧನೆಯಲ್ಲಿ ಸಮಭಾಗಿ. ವಿದ್ಯಾವಾಹಿನಿ ಸಮೂಹ ಸಂಸ್ಥೆಗಳು ಇಂದು ಎಲ್ಲಾ ರೀತಿಯಿಂದಲೂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ. ಈ ಸೇವೆಯನ್ನು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗುವಲ್ಲಿ ಪ್ರದೀಪ್ ಕುಮಾರ್ ಅವರು ಶ್ರಮಿಸುತ್ತಿದ್ದಾರೆ. ಅವರಿಗೂ ಅಭಿನಂದನೆಗಳು ಸಲ್ಲುತ್ತವೆ ಎಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸದಸ್ಯ ಜಿ.ಬಿ.ಜ್ಯೋತಿಗಣೇಶ್, ಕೆ.ಬಿ.ಜಯಣ್ಣನವರಂಥ ಹಿರಿಯರು ಹಾಕಿಕೊಟ್ಟ ತಳಹದಿಯು ಇಂದು ತುಮಕೂರಿಗೆ ವಿಶಿಷ್ಟ ಮನ್ನಣೆಯನ್ನು ತಂದುಕೊಟ್ಟಿದೆ. ಅನೇಕ ಮಂದಿ ಸಾಧಕರನ್ನು ಈ ನಾಡು ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಿದೆ. ಮುಂದಿನ ತಲೆಮಾರಿನವರು ಹಿರಿಯರ ಪರಿಶ್ರಮವನ್ನು, ತ್ಯಾಗವನ್ನು ಅರ್ಥಮಾಡಿಕೊಂಡು ಸಮಾಜವನ್ನು ಬೆಳೆಸಬೇಕು ಎಂಬ ಆಶಯವನ್ನು ವ್ಯಕ್ತ ಪಡಿಸಿದರು.
ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾರ್ಯಕ್ರಮಕ್ಕೆ ಶುಭಕೋರಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಭಿನಂದನ ಭಾಷಣ ಮಾಡಿದರು. ಪತ್ರಕರ್ತ ಡಿ.ಎಂ. ಸತೀಶ್ ಅಭಿನಂದನ ಪತ್ರವನ್ನು ವಾಚನ ಮಾಡಿದರು. ಅಭಿನಂದನ ಗ್ರಂಥದ ಸಂಪಾದಕ ಉಮಾ ಮಹೇಶ್ ಗ್ರಂಥವನ್ನು ಪರಿಚಯಿಸಿದರು.ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಬಿ.ಜಯಣ್ಣ ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಮಕ್ಕಳನ್ನು ತಮ್ಮಲ್ಲಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸುವ ಪೋಷಕರು ನಿಜಾರ್ಥದಲ್ಲಿ ಸಂಸ್ಥೆಯನ್ನು ಬೆಳೆಸಿದವರು. ಈ ಅಭಿನಂದನೆಗಾಗಿ ಎಲ್ಲರಿಗೂ ಆಭಾರಿಯಾಗಿದ್ದೇನೆ. ನನ್ನ ಬದುಕಿನ ಅತ್ಯಂತ ಸಂತೃಪ್ತ ಕ್ಷಣ ಇಂದು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಎಸ್. ನಾಗಣ್ಣ, ಸರ್ವೋದಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಜಿ. ಸೀತಾರಾಂ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ. ಲಕ್ಷö್ಮಣದಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಸ್. ಸಿದ್ಧಲಿಂಗಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು. ಅಭಿನಂದನ ಗ್ರಂಥದ ಸಂಪಾದಕರು ಮತ್ತು ಎಲ್ಲ ಲೇಖಕ/ಕಿಯರನ್ನು ಅಭಿನಂದಿಸಿ ಗೌರವಪ್ರತಿ ನೀಡಲಾಯಿತು.ಮಾಜಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ವಿಧಾನಸಭಾ ಸದಸ್ಯ ಬಿ.ಸುರೇಶ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹಾಗೂ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಬಿಜೆ ಅಭಿನಂದನ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಸ್ವಾಗತಿಸಿ, ಸದಸ್ಯ ಡಿ.ಎನ್. ಯೋಗೀಶ್ವರಪ್ಪ ವಂದಿಸಿದರು. ಸೌಮ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಕೋಟ್....ವಿದ್ಯೆಯೆಂಬ ಆಸ್ತಿಯು ಎಲ್ಲ ಜನತೆಯ ಕೈಯಳತೆಯಲ್ಲಿ ಇರುವಂತೆ ಮಾಡಿದ್ದರಿಂದ ಈ ಸುಧಾರಣೆ ಸಾಧ್ಯವಾಗಿದೆ. ಕಲ್ಪತರು ನಗರ ಶೈಕ್ಷಣಿಕ ನಗರವಾಗುವಲ್ಲಿ ಇಲ್ಲಿನ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಮಹನೀಯರ ಕನಸಿದೆ, ಅವರ ಮನೆಮಂದಿಯ ಕೊಡುಗೆಯಿದೆ.
ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ