ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಸಾಮಾಜಿಕ ನ್ಯಾಯ ಸಮಿತಿ
ಹಿರಿಯ ಲೇಖಕ, ಖ್ಯಾತ ವಕೀಲ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ.ಸಿ.ಎಸ್.ದ್ವಾರಕನಾಥ್ ಅವರಿಗೆ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಶೋಷಿತ ಸಮುದಾಯದ ನಾಯಕರಿಗೊಂದು ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮತ್ತು ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.
ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ರಾಜ್ಯಾಧ್ಯಕ್ಷ, ಪಕ್ಷದ ಮುಖ್ಯ ವಕ್ತಾರ ಮತ್ತು ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹೀಗೆ ಹಲವು ಜವಾಬ್ದಾರಿಗಳನ್ನು ದ್ವಾರಕಾನಾಥ್ ಯಶಸ್ವಿಯಾಗಿ ನಿಭಾಯಿಸುತ್ತಿದ್ದು ಪಕ್ಷದ ಸಿತ್ತಿನ ಸಿಪಾಯಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.ಆದಿವಾಸಿಗಳು ಅಲೆಮಾರಿ ಜನಾಂಗದವರ ಬಗ್ಗೆ ಅಪಾರ ಕಾಳಜಿ ಹೊಂದಿರುವ, ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳ ಪ್ರಬಲ ಧ್ವನಿಯಾಗಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ದ್ವಾರಕನಾಥ್ ಅವರಿಗೆ ಶಾಸನಬದ್ಧವಾದ ಅಧಿಕಾರ ದೊರತರೆ ಈ ವರ್ಗಗಳ ಬಲವರ್ಧನೆಗೆ ಸಹಕಾರಿಯಾಗುವುದಲ್ಲದೆ ಪಕ್ಷಕ್ಕೂ ಸಹ ಉತ್ತಮ ಹೆಸರು ಬರಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ದ್ವಾರಕನಾಥ್ ಅವರಿಗೆ ವಿಧಾನ ಪರಿಷತ್‌ನ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯ ಉಪಾಧ್ಯಕ್ಷರಾದ ಪಾರ್ವತಿ, ಕಾಂಗ್ರೆಸ್ ಮುಖಂಡರಾದ ಕಮಲಮ್ಮ, ಪೃಥ್ವಿ ಕುಮಾರ್, ಸುನಿಲ್ ಕುಮಾರ್ ಇದ್ದರು.