ಮುಂಡರಗಿ: 2022 ರ ಜು. 1ರಿಂದ 2024 ಜು.31ರ ಅವಧಿಯಲ್ಲಿ ನಿವೃತ್ತರಾದ 26,700 ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದಲ್ಲಿ ಅಗಿರುವ ಆರ್ಥಿಕ ನಷ್ಟದ ಬೇಡಿಕೆ ಈಡೇರಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಮುಂಡರಗಿ ತಾಲೂಕು ಘಟಕದಿಂದ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ ನೌಕರರಂತೆ ನಾವು 2022ರ ಜು. 1ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯದ್ಯಾಪ ಕೇಳುತ್ತಿರುವುದಿಲ್ಲ ಬದಲಾಗಿ ನಾವು ಕೇಳುತ್ತಿರುವುದು 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಅರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಟಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತ ಮಾತ್ರ ಕೊಡಬೇಕೆಂದು 2024ರ ಆ. 11ರಿಂದ ಈ ತನಕ ಸುಮಾರು 5 ತಿಂಗಳಿಂದ ಡಾವಣಗೇರಿಯಲ್ಲಿ ಬೃಹತ್ ಸಭೆ ನಡೆಸಿ ಒತ್ತಾಯಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಬೆಂಗಳೂರಿನಲ್ಲಿ ನಿವೃತ್ತ ಲೋಕಾಯುಕ್ತ ಅಧಿಕಾರಿ ಸಂತೋಷ ಹೆಗಡೆ ನೇತೃತ್ವದಲ್ಲಿ ಹೋರಾಟ ನಡೆಸಿ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೊಜನವಾಗಿಲ್ಲ. 10 ದಿನಗಳೊಳಗಾಗಿ ಮುಖ್ಯಮಂತ್ರಿಯವರು ನಮ್ಮ ಬೇಡಿಕೆ ಈಡೇರಿಕೆ ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಅನಿರ್ಧಿಷ್ಟ ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ನಿವೃತ್ತ ನೌಕರರ ವೇದಿಕೆ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಮ ಜಡಿ ಮಾತನಾಡಿ, ಸರ್ಕಾರ ಶೀಘ್ರವೇ ನಮ್ಮೆಲ್ಲ ನಿವೃತ್ತ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಎಲ್ಲ ನಿವೃತ್ತ ನೌಕರರ ಪರವಾಗಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದರು.ತಹಸೀಲ್ದಾರ ಯರ್ರಿಸ್ವಾಮಿ.ಪಿ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಆರ್.ಬಿ. ಹಕ್ಕಂಡಿ, ಎಂ.ಆರ್.ಕುಲಕರ್ಣಿ, ಬಿ.ಅರ್.ಕಬ್ಬೇರ್, ಲಿಂಗರಾಜ ದಾವಣಗೆರೆ, ಕಾಶಿನಾಥ ಶಿರಬಡಗಿ, ಎಸ್.ಡಿ.ಗಡೆದ, ಎಸ್.ಎನ್. ಪಾಟೀಲ, ಎಸ್.ಬಿ.ಉಂಕಿ, ಎನ್.ಎನ್. ಕಲ್ಕೇರಿ, ಮರಿಗೌಡ, ಜಿ.ಎಲ್. ಹೊಸೂರು, ಎ.ಪಿ.ಮಾನೆ, ಜಿ.ಎಸ್.ಗುಂಡಗಿ, ಆರ್.ಎಂ. ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.