ಶಿವಾನಂದ ಗೊಂಬಿ
ಡ್ರಗ್ಸ್ ವಿಷವರ್ತುಲದಲ್ಲಿ ಕಿತ್ತೂರು ಕರ್ನಾಟಕ ಅಕ್ಷರಶಃ ನಲುಗುತ್ತಿದೆ. ಪ್ರಮುಖವಾಗಿ ವಿದ್ಯಾರ್ಥಿಗಳು, ಯುವ ಸಮೂಹ, ಕೂಲಿ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಡ್ರಗ್ಸ್ ಕಾರಣವಾಗುತ್ತಿರುವ ಅಂಶ ಕೂಡ ಬೆಳಕಿಗೆ ಬರುತ್ತಿದೆ.
ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಮಾದಕ ವಸ್ತುಗಳೆಂದರೆ ಗಾಂಜಾ. ಗಾಂಜಾನೇ ಇಲ್ಲಿ ಕಿಂಗ್. ಉಳಿದಂತೆ, ಚರಸ್, ಕೊಕೇನ್, ಹೆರಾಯಿನ್ ಅಷ್ಟೇ ಅಲ್ಲದೆ, ಎಂಡಿಎಂಎನಂತಹ ವಿದೇಶಿ ಡ್ರಗ್ಸ್‌ಗಳು ಕೂಡ ಪತ್ತೆಯಾಗುತ್ತಿವೆ.ನೈಟ್ ಲೈಫ್:
ಮೊದಲೆಲ್ಲಾ ಹೆರಾಯಿನ್, ಚರಸ್, ಕೊಕೇನ್‌ಗಳು ಅಲ್ಲಲ್ಲಿ ಅಲ್ಪ-ಸ್ವಲ್ಪ ಸಿಗುತ್ತಿದ್ದವು. ಆದರೆ, ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಎಂಡಿಎಂಎ (ಮೆಥಿಲೆನೆಡಿಯೋಕ್ಷಿ ಎನ್- ಮೆಥಾಂಫೆಟಮೈನ್) ಕೂಡ ಪತ್ತೆಯಾಗುವ ಮೂಲಕ ಪೊಲೀಸರೇ ಹುಬ್ಬೇರಿಸುವಂತೆ ಆಗಿತ್ತು. ಆಗ ಬರೋಬ್ಬರಿ ₹12 ಲಕ್ಷ ಮೌಲ್ಯಕ್ಕೂ ಅಧಿಕ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಗಾಂಜಾ ಮಾರಾಟಕ್ಕೆದೊಡ್ಡ ಜಾಲವೇ ಹುಬ್ಬಳ್ಳಿಯಲ್ಲಿದೆ. ಹಲವು ವರ್ಷಗಳಿಂದಲೂ ನಿರಂತರವಾಗಿ ಗಲ್ಲಿ-ಗಲ್ಲಿಗಳಲ್ಲೂ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಇಲ್ಲಿ ಗಾಂಜಾ ಹೋಲ್‌ಸೇಲ್ ಹಾಗೂ ಚಿಲ್ಲರೆಯಾಗಿಯೂ ದೊರೆಯುತ್ತದೆ. 5 ಗ್ರಾಂ.ಗಳ ಪುಟ್ಟ ಪ್ಯಾಕೆಟ್ ಸೇರಿದಂತೆ ನೂರಾರು ಗ್ರಾಂ.ಗಳ ಲೆಕ್ಕದಲ್ಲೂ ಮಾರಾಟವಾಗುತ್ತಿರುವುದು ಬಹಿರಂಗ ಸತ್ಯ.
(ಬಾಕ್ಸ್ ):
ಗಾಂಜಾ ಸೇರಿದಂತೆ ಡ್ರಗ್ಸ್ ವಿಷದ ಜಾಲಕ್ಕೆ ಸಿಲುಕಿರುವವರಿಂದಲೇ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ಆರೋಪಿಯೂ ಗಾಂಜಾ ಗುಂಗಿನಲ್ಲೇ ಅತ್ಯಾಚಾರ ಮಾಡಿದ್ದ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಗಾಂಜಾ ಕಿಂಗ್ ಆದರೂ ಇತ್ತೀಚಿನ ದಿನಗಳಲ್ಲಿ ವೈಟ್ನರ್ ಕೂಡ ಮಾದಕ ವಸ್ತುವಾಗಿ ಬಳಕೆ ಆಗುತ್ತಿರುವುದು ಕಂಡು ಬರುತ್ತಿದೆ. ಹೆಚ್ಚಾಗಿ ಕೊಳಚೆ ಪ್ರದೇಶದಲ್ಲಿನ ಬಡಮಕ್ಕಳೇ ವೈಟ್ನರ್ ಬಳಕೆ ಮಾಡುತ್ತಾರೆ. ಈಚೆಗೆ ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಇದನ್ನು ಹೆಚ್ಚಾಗಿ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬುದನ್ನು ಸರ್ಕಾರಿ ವೈದ್ಯರೊಬ್ಬರು ತಿಳಿಸುತ್ತಾರೆ. ಕರ್ಚೀಫ್‌ನಲ್ಲಿ ಮೂರಾಲ್ಕು ಹನಿ ವೈಟ್ನರ್ ಹಾಕಿಕೊಂಡು ಮೂಗಿನಿಂದ ಇನ್‌ಹೇಲರ್‌ನಂತೆ ಜೋರಾಗಿ ಎಳೆದುಕೊಳ್ಳುತ್ತಾರೆ. ಇದು ಎರಡ್ಮೂರು ಗಂಟೆ ಮತ್ತೇರಿ ಉಳಿಯುತ್ತದೆಯಂತೆ. ವೈಟ್ನರ್ ಕೊಳ್ಳಲು ಬೇಕಾದ ಹಣಕ್ಕಾಗಿ ಬಡ ಮಕ್ಕಳು ಭಿಕ್ಷಾಟನೆ ನಡೆಸುವುದೂ ಉಂಟು. ಆದರೆ, ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಏಕೆಂದರೆ, ಇದರಿಂದ ವಾಸನೆಯೂ ಬರಲ್ಲ, ಗೊತ್ತೂ ಆಗಲ್ಲ. ಆದರೆ, ಮತ್ತೇರಿಸಿಕೊಂಡು ಗುಂಗಿನಲ್ಲೇ ವ್ಯಸನಿಗಳು ಇರುತ್ತಾರೆ.