ರಾಜಣ್ಣ ವಿರುದ್ಧ ಆಕ್ರೋಶ
ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹನುಮೇಗೌಡರು ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದು ಬೇಲೂರು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ದೇವೇಗೌಡರು ಸಾಯುವ ವಯಸ್ಸಿನಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಾಗಿತ್ತೇ? ಎಂದು ರಾಜಣ್ಣ ಟೀಕೆ ಮಾಡಿದ್ದಾರೆ. ಸಾಯುವ ವಯಸ್ಸು ಎಷ್ಟು ಇದೆ ಎಂದು ಹೇಳುವುದಕ್ಕೆ ಇವರು ಬ್ರಹ್ಮ ಅಲ್ಲ. ವಯಸ್ಸು ಮುಖ್ಯವಲ್ಲ. ಆ ವಯಸ್ಸಿನ ಇಚ್ಛಾಶಕ್ತಿ ಮುಖ್ಯ, ರಾಷ್ಟ್ರ ಮತ್ತು ರಾಜ್ಯದ ಬಗ್ಗೆ ಚಿಂತನೆ ಇಟ್ಟುಕೊಂಡು ೯೨ನೇ ವಯಸ್ಸಿನಲ್ಲೂ ರಾಜ್ಯಾದ್ಯಂತ ದೇವೇಗೌಡ ಪ್ರವಾಸ ಮಾಡಿದ್ದಾರೆ. ನಾನು ಕಿಂಗ್, ಸ್ಟಾರ್ ಎಂದು ರಾಜಣ್ಣ ಅಂದುಕೊಂಡಿದ್ದಾರೆ. ಆದರೆ ದೇವೇಗೌಡರಿಗೆ ಸಾಯುವ ವಯಸ್ಸು ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ’ ಎಂದು ಕಿಡಿಕಾರಿದರು.‘ರಾಜಣ್ಣ ಅಗೌರವ ತೋರುವ ಕೆಲಸ ಮಾಡಿದ್ದಾರೆ, ದೇವೇಗೌಡರ ದೇಹಕ್ಕೆ ಮಾತ್ರ ವಯಸ್ಸಾಗಿದೆ, ಆದರೆ ಅವರ ಚಿಂತನೆಗಳಿಗೆ ಎಂದಿಗೂ ವಯಸ್ಸಾಗುವುದಿಲ್ಲ, ಅಪವಿತ್ರ ಮೈತ್ರಿ ಎನ್ನುವ ಕಾಂಗ್ರೆಸ್ ನಾಯಕರು ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದರು. ಅದು ಅಪವಿತ್ರ ಅಲ್ವಾ’ ಎಂದು ಪ್ರಶ್ನಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ಮಾತನಾಡಿ, ‘ಕಟ್ಟಾಯವು ಹಾಸನಕ್ಕೆ ಸೇರಬೇಕಾದ ಹೋಬಳಿಯನ್ನು ಉದ್ದೇಶಪೂರ್ವಕವಾಗಿ ಜೆಡಿಎಸ್ ಪಕ್ಷದವರು ಸಕಲೇಶಪುರಕ್ಕೆ ಸೇರಿಸಿದರು. ಇದರಿಂದಲೇ ಕಟ್ಟಾಯ ಹೋಬಳಿ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಿವಲಿಂಗೇಗೌಡ ಮತ್ತು ದೇವರಾಜೇಗೌಡ ಹೇಳಿದ್ದಾರೆ. ಕಟ್ಟಾಯ ಹೋಬಳಿಯನ್ನು ಹಾಸನಕ್ಕೆ ಸೇರಿಸಬೇಕೆಂದು ಈ ವಿಚಾರವಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಂಗಳೂರಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ಏಕೆ ಪ್ರತಿಭಟಿಸಲಿಲ್ಲ’ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಲಿಂಗೇಶ್.