ಮಾಜಿ ಎಂಎಲ್‌ಸಿ ಶುಭಲತಾ ಅಸ್ನೋಟಿಕರ್ ನಿಧನ

KannadaprabhaNewsNetwork | Published : Sep 26, 2024 9:57 AM

ಸಾರಾಂಶ

ಶುಭಲತಾ ಅವರು ಪತಿ ವಸಂತ ಅಸ್ನೋಟಿಕರ್ ಹತ್ಯೆಯ ತರುವಾಯ ವಿಧಾನಪರಿಷತ್ ಸದಸ್ಯೆಯಾಗಿದ್ದರು. ಅವರಿಗೆ ಪುತ್ರ ಆನಂದ ಅಸ್ನೋಟಿಕರ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿಗಳು ಇದ್ದಾರೆ.

ಕಾರವಾರ: ವಿಧಾನಪರಿಷತ್ ಮಾಜಿ ಸದಸ್ಯೆ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ತಾಯಿ ಶುಭಲತಾ ವಸಂತ ಅಸ್ನೋಟಿಕರ್ (72) ಅವರು ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು. ಕೆಲ ತಿಂಗಳುಗಳಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಅಸುನೀಗಿದರು. ಪತಿ ವಸಂತ ಅಸ್ನೋಟಿಕರ್ ಹತ್ಯೆಯ ತರುವಾಯ ವಿಧಾನಪರಿಷತ್ ಸದಸ್ಯೆಯಾಗಿದ್ದರು. ಅವರಿಗೆ ಪುತ್ರ ಆನಂದ ಅಸ್ನೋಟಿಕರ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿಗಳು ಇದ್ದಾರೆ. ಶುಭಲತಾ ಅವರ ನಿಧನಕ್ಕೆ ಹಲವು ಗಣ್ಯರು, ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ. ಶುಭಲತಾ ನಿಧನಕ್ಕೆ ಕಾಗೇರಿ ಸಂತಾಪ

ಕಾರವಾರ: ವಿಧಾನಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ ಈ ಜಿಲ್ಲೆ ಕಂಡ ಸರಳ ಸ್ವಭಾವದ ಸಾತ್ವಿಕ ರಾಜಕಾರಣಿಯಾಗಿದ್ದು, ಅವರು ನಮ್ಮನ್ನು ಅಗಲಿರುವುದು ದುಃಖದ ಸಂಗತಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರಿದ್ದಾರೆ. ತನ್ನ ಪತಿಯನ್ನು ಕಳಕೊಂಡ ನಂತರವೂ ಧೃತಿ ಗೆಡದೇ ರಾಜಕಾರಣದಲ್ಲಿ ಮುಂದುವರೆದು ಜನ ಸೇವೆ ಮಾಡಿ ಸಾಹಸಗೈದಿರುವದನ್ನು ನಾಡು ಮರೆಯಲಾರದು ಎಂದು ಸ್ಮರಿಸಿರುವ ಕಾಗೇರಿ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ನಿಧನಕ್ಕೆ ರೂಪಾಲಿ ನಾಯ್ಕ ಶೋಕ

ವಿಧಾನಪರಿಷತ್ ಮಾಜಿ ಸದಸ್ಯರಾಗಿದ್ದು, ಜನಾನುರಾಗಿಯಾಗಿದ್ದ ಶುಭಲತಾ ಅಸ್ನೋಟಿಕರ್ ನಿಧನರಾಗಿರುವುದು ಅತೀವ ನೋವನ್ನುಂಟುಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಸಂತಾಪ ಸೂಚಿಸಿದ್ದಾರೆ. ಶುಭಲತಾ ಅಸ್ನೋಟಿಕರ ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಅವರ ಅಗಲುವಿಕೆಯಿಂದ ಒಬ್ಬ ಜನಪರ ನಾಯಕಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲು, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article