ಕನ್ನಡಪ್ರಭ ವಾರ್ತೆ ಕುಣಿಗಲ್
ಮೃತಪಟ್ಟವರು ಮಂಡ್ಯ ಮೂಲದ ಸ್ವರ್ಣನಗರ ನಿವಾಸಿಗಳೆಂದು ತಿಳಿದು ಬಂದಿದೆ. ಮೃತ ದಂಪತಿ ಕುಮಾರ ನರಸಿಂಹಮೂರ್ತಿ (65) ಹಾಗೂ ಆತನ ಪತ್ನಿ ಗಾಯತ್ರಿ (61), ತಂಗಿ ಕೆ.ಆರ್. ಗಾಯಿತ್ರಿ (60) ಡ್ರೈವರ್ ರಘುಕುಮಾರ್ (55) ಮೃತಪಟ್ಟವರು.
ಮೃತ ದಂಪತಿ ತಮ್ಮ 25ನೇ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ತುಮಕೂರಿನ ಬಳಿ ಇರುವ ದೇವರಾಯನ ದುರ್ಗದ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.ಮಂಡ್ಯ ನಗರದಲ್ಲಿ ನಡೆಯಬೇಕಾಗಿದ್ದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ವಾಪಸ್ ಹೋಗುವಾಗ ಎದುರಿಗೆ ಬಂದ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರ ದೇಹ ಹಾಗೂ ಕಾರಿನ ಬಿಡಿ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿದ್ದವು.
ಪೊಲೀಸರು ಸಂಚಾರಿ ಸುಗಮಗೊಳಿಸುವಲ್ಲಿ ಗಂಟೆಗಟ್ಟಲೇ ಸಾಹಸಪಟ್ಟು ನಂತರ ರಸ್ತೆ ಸುಲಭ ಸಂಚಾರಕ್ಕೆ ಅನುವು ಮಾಡಿದ್ದರು.
ಕಳೆದ ಹಲವಾರು ದಿನಗಳಿಂದ ತುಮಕೂರು- ಮದ್ದೂರು ಕೆಶಿಪ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಮೂರು ದಿನಗಳಲ್ಲಿ ಕೊತ್ತಗೆರೆ ಬಳಿ ನಡೆದಂತಹ ಅಪಘಾತಗಳಲ್ಲಿ ಎರಡು, ಗವಿಮಠದ ಬಳಿ ಒಂದು ಹಾಗೂ ಈ ಘಟನೆಯಲ್ಲಿ ನಾಲ್ಕು ಮಂದಿ ಸೇರಿ ಒಟ್ಟಾರೆ ಏಳು ಮಂದಿ ಮೃತಪಟ್ಟಿದ್ದಾರೆ.
ಕೆಶಿಪ್ ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆದು ಸರ್ಕಾರ ಪರಿಹಾರ ನೀಡಿದೆ. ಆದರೆ ಕೆಲವೆಡೆ ಆ ಭೂಮಿಯನ್ನು ಕೂಡ ರಸ್ತೆಗೆ ಬಳಸಿಕೊಳ್ಳದೆ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಪಡಿಸಿದರೆ ಅಪಘಾತಗಳನ್ನು ತಡೆಯಲು ಸಂಪೂರ್ಣ ಸಾಧ್ಯವಾಗುತ್ತದೆ. ಏಕಪದ ರಸ್ತೆಯಿಂದ ದ್ವಿಪಥ ರಸ್ತೆಗೆ ಮೇಲ್ದರ್ಜೆಗೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ