ಹಿಂದೆ ಏಕಾಗ್ರತೆಯಿಂದ ಓದುತ್ತಿದ್ದಕ್ಕೂ, ಇಂದು ಮೊಬೈಲ್ ಕೈಯಲ್ಲಿಡಿದು ಪರದೆಯ ಮೇಲೆ ಮೂಡುವ ಮಾಹಿತಿಯನ್ನು ಕೂಡ ಓದುವಷ್ಟು ಸಂಯಮ, ತಾಳ್ಮೆ ಇಂದಿನವರಿಗಿಲ್ಲ.
ಕನ್ನಡಪ್ರಭ, ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಮತ
ಕನ್ನಡಪ್ರಭ ವಾರ್ತೆ ಮಧುಗಿರಿ
ಕಷ್ಟಪಟ್ಟು ವ್ಯಾಸಂಗ ಮಾಡಿ, ಪದವಿ ಗಳಿಸುವುದಷ್ಠೇ ಸಾಧನೆಯಲ್ಲ. ವಿಶ್ವಜ್ಞಾನವನ್ನು ಅರಗಿಸಿಕೊಂಡು ಜ್ಞಾನಮುಖಿಯಾಗಿ ಬೆಳೆಯುವುದು ಮಹತ್ತರ ಸಾಧನೆ. ಇದನ್ನು ಗಳಿಸಲು ಬೆರಳ ತುದಿಗೆ ಸುಲಭವಾಗಿ ದಕ್ಕುವ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಿಂತ ಅಲೋಚನಾ ಪರವಾದ ಅಧ್ಯಯನ ಮಾಡಬೇಕು ಎಂದು ಕನ್ನಡಪ್ರಭ, ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.
ತುಮಕೂರು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು, ವೈಸಿರಿ ಇನ್‌ಸ್ಪಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್ ಹಾಗೂ ವಿದ್ಯಾವಾಹಿನಿ ಪ್ಯಾರಾ ಮೆಡಿಕಲ್ ಕಾಲೇಜುಗಳ ವಾರ್ಷಿಕ ಸಾಂಸ್ಕೃತಿಕ ಹಬ್ಬ 2026 ವಿವಿಯನ್ ವೈಭವ ಸ್ನಾತಕೋತ್ತರ ಪದವಿಗಳ ಸಾಂಸ್ಕೃತಿಕ ಕಲರವ, ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದೆ ಏಕಾಗ್ರತೆಯಿಂದ ಓದುತ್ತಿದ್ದಕ್ಕೂ, ಇಂದು ಮೊಬೈಲ್ ಕೈಯಲ್ಲಿಡಿದು ಪರದೆಯ ಮೇಲೆ ಮೂಡುವ ಮಾಹಿತಿಯನ್ನು ಕೂಡ ಓದುವಷ್ಟು ಸಂಯಮ, ತಾಳ್ಮೆ ಇಂದಿನವರಿಗಿಲ್ಲ. ತಂತ್ರಜ್ಞಾನಕ್ಕೆ ದಾಸರಾಗಿ ಸ್ವಂತ ಅಲೋಚನೆ, ವಿಚಾರಶಕ್ತಿ ಕಳೆದುಕೊಳ್ಳುತ್ತಿರುವುುದ ವಿಷಾದನೀಯ ಎಂದರು.
ಕೇವಲ ಪುಸ್ತಕದ ಹುಳುವಾಗದೇ ಹೊರಗಿನ ಜಗತ್ತನ್ನು ವಿಸ್ಮಯದ ಕಣ್ಣುಗಳಿಂದ, ತೆರೆದ ಮನಸ್ಸಿಂದ ನೋಡುವ ಅರಗಿಸಿಕೊಳ್ಳುವ ವಿಧಾನವನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು. ಪೂರ್ಣ ವ್ಯಕ್ತಿತ್ವ ಅರಳುವುದು ಆತ್ಮವಲೋಕನದಿಂದ ವಿಶ್ವ ವಿದ್ಯಾನಿಲಯಗಳು ಬುದ್ದಿವಂತರನ್ನಾಗಿಸಿ ದೇಶದ ಆಸಕ್ತಿ ಸಳೆಯುವ ವ್ಯಕ್ತಿತ್ವವನ್ನು ವೇದಿಕೆಗೆ ಅವಕಾಶ ಮಾಡಿ ಇಂದಿನ ಯುವ ಜನರಲ್ಲಿ ವೈಚಾರಿಕತೆ ಅರಳಿಸುತ್ತವೆ. ಟೆಕ್ನಲಾಜಿ ಎಂದರೆ ಎಲ್ಲೋ ಇರುವ ವಿಷಯವನ್ನು ತಂದು ಯಥವತ್ತಾಗಿ ಬಳಸಿಕೊಳ್ಳುವುದಲ್ಲ ಎಂದರು.
ವಿದ್ಯಾವಾಹಿನಿ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ.ಪ್ರದೀಪ್ ಕುಮಾರ್ ಮಾತನಾಡಿ, ಶಿಕ್ಷಣದ ಅಂತಿಮ ಗುರಿ ಕೇವಲ ಒಬ್ಬ ಸಮರ್ಥ ಉದ್ಯೋಗಿಯಾಗುವುದಲ್ಲ. ಬದಲಾಗಿ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಒಬ್ಬ ಸಂವೇದನಾಶೀಲ ಮನುಷ್ಯನಾಗುವುದು ಎಂದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಬಿ. ಜಯಣ್ಣ ಮಾತನಾಡಿ, ಸಂಸ್ಥೆಯು ಕಳೆದ ಹಲವು ದಶಕಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ತಾಂತ್ರಿಕವಾಗಿ ಎಷ್ಟು ಸಬಲರಾಗುತ್ತಾರೋ ಅಷ್ಟು ಸಾಂಸ್ಕೃತಿಕವಾಗಿಯೂ ಶ್ರೀಮಂತರಾಗಬೇಕು ಎಂದು ಹಾರೈಸಿದರು.
ಪ್ರತಿಭೆಗಳಿಗೆ ಚಿನ್ನದ ಪದಕ:
ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆ ಮಾಡಿದ ಬಿಸಿಎ ವಿಭಾಗದ ಅನನ್ಯ ಮತ್ತು ಬಿಕಾಂ ವಿಭಾಗದ ಶ್ರಾವ್ಯ ಬದ್ರಿನಾಥ್ ಅವರಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯ ನೀಡಿ ಪುರಸ್ಕರಿಸಲಾಯಿತು. ಅಲ್ಲದೆ, ಪ್ರತಿ ಸೆಮಿಸ್ಟರ್‌ನ 19 ಟಾಪರ್‌ಗಳಿಗೆ ತಲಾ 30 ಸಾವಿರ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾವಾಹಿನಿ ಸಂಸ್ಥೆಯ ವಿದ್ಯಾವಾಹಿನಿ ಸಿಎ ಚಂದನ ಅವರನ್ನು ಇದೇ ವೇಳೆ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳ ಪ್ರತಿಭೆಗಳಿಗೆ ಗೌರವ ಸನ್ಮಾನ:
ಶೈಕ್ಷಣಿಕ, ಸಂಶೋಧನೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶೈಕ್ಷಣಿಕವಾಗಿ ಸಿ.ಎ, ಸಿ.ಎಂ.ಎ ಮತ್ತು ಸಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನೂರಾರು ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಮತ್ತು ಪ್ಯಾರ ಮೆಡಿಕಲ್ ಟಾಪರ್‌ಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಅರುಣ, ಉಮೇದ ಪರಿವೀನ್, ಸಂಯೋಜಕರಾದ ಸಿದ್ದೇಶ್ವರ ಸ್ವಾಮಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.