ಗಂಗಾವತಿ: ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಯ ದೇಗುಲವನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿ ಖಾಸಗಿಯವರಿಗೆ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನೆಯ ಕಾರ್ಯಕರ್ತರು ಅಂಜನಾದ್ರಿ ಬೆಟ್ಟದ ಕೆಳಗೆ ಧರಣಿ ನಡೆಸಿದರು.
ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟವನ್ನು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅತಿತಿಕ್ರಮಣ ಮಾಡಿದ್ದು, ಸರ್ಕಾರದ ಅಧಿಕಾರಿಗಳು ಸರಿಯಾಗಿ ಅಂಜನಾದ್ರಿ ದೇವಸ್ಥಾನದಲ್ಲಿ ಧಾರ್ಮಿಕ ತ್ರಿಕಾಲ ಪೂಜೆ ಮಾಡುತ್ತಿಲ್ಲ ಹಾಗೂ ಬರುವ ಭಕ್ತಾದಿಗಳಿಗೆ ಭೋಜನಾ ಪ್ರಸಾದ ವ್ಯವಸ್ಥೆ ಸಮರ್ಪಕವಾಗಿ ಸಿಗುತ್ತಿಲ್ಲ ಹಾಗೂ ಬಂದಂತಹ ಭಕ್ತಾದಿಗಳಿಗೆ ವಿಶ್ರಾಂತಿ ಪಡೆಯಲು ಸರಿಯಾದ ವ್ಯವಸ್ಥೆ ಇರುವುದಿಲ್ಲ ಎಂದರು.
ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಂದ ಪ್ರತಿ ತಿಂಗಳು ದೇವಸ್ಥಾನದ ಹುಂಡಿಯಲ್ಲಿ ತಿಂಗಳಿಗೆ ಲಕ್ಷ ಲಕ್ಷ ದೇಣಿಗೆ ಹಣ ಸಂಗ್ರಹವಾಗುತ್ತಿದೆ, ಅಲ್ಲದೇ ವಾರ್ಷಿಕ ಉತ್ಸವಗಳಾದ ಹನುಮಾನ ಜಯಂತಿ, ಶ್ರೀರಾಮನವಮಿ, ದೀಪಾವಳಿ, ಯುಗಾದಿ, ಹನುಮಾನ ಮಾಲಾ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಸರ್ಕಾರಕ್ಕೆ ಈ ದೇವಸ್ಥಾನದಿಂದ ಸಂಗ್ರಹವಾಗುತ್ತಿದ್ದು, ಆದರೆ ಸರ್ಕಾರದಿಂದ ಯಾವುದೇ ವ್ಯವಸ್ಥೆಗಳು ಆಗುತ್ತಿಲ್ಲ. ಕಾರಣ ಅಂಜನಾದ್ರಿ ದೇವಸ್ಥಾನ ಸರಿಯಾಗಿ ನಿರ್ವಹಿಸದ ಸರ್ಕಾರ ಕೂಡಲೇ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿ ಖಾಸಗಿ ಸಂಘ-ಸಂಸ್ಥೆ ಅಥವಾ ಟ್ರಸ್ಟ್ ಕಮಿಟಿಗೆ ನಿರ್ವಹಿಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಪಂಪಣ್ಣ ನಾಯಕ, ಅಮರೇಶ ಸಿಂಗನಾಳ, ಹುಲುಗಪ್ಪ ಕಮಲಾಪುರ, ಚಂದ್ರಶೇಖರಗೌಡ, ಹನುಮಂತಪ್ಪ, ಲಕ್ಷ್ಮೀ, ಬಸವರಾಜ, ಅಂಬಣ್ಣ ಕಮಲಾಪುರ, ಅಂಜಿನಪ್ಪ ಎಲ್., ಸುರೇಶ, ರೆಡ್ಡೆಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.