ಸ್ತ್ರೀಯರೂ ಪುರುಷರಂತೆ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ-ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ಹಾದಿ ತೋರಿಸಿದರು
ಕನಕಗಿರಿ: ಹೆಣ್ಣು ಮಕ್ಕಳು ಶಿಕ್ಷಣ ಕಲಿಯದ ಪರಿಸ್ಥಿತಿಯಲ್ಲೂ ಅವರಿಗೆ ಶಿಕ್ಷಣ ನೀಡಿದ ಕೀರ್ತಿ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವ ನಿಮಿತ್ತ ಶನಿವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಮಾಜದ ಅನಿಷ್ಠ ಪದ್ಧತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ, ಕೇಶ ಮುಂಡನೆ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದರು. ಈ ಎಲ್ಲ ಸಮಾಜದ ಸೇವೆ ಮೆಚ್ಚಿದ ಬ್ರಿಟಿಷ್ ಸರ್ಕಾರ ಅಕ್ಷರದ ಅವ್ವಗೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಬಿರುದು ನೀಡಿ ಸತ್ಕರಿಸಿದೆ. ಸ್ತ್ರೀಯರೂ ಪುರುಷರಂತೆ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ-ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ಹಾದಿ ತೋರಿಸಿದರು. ಇಂತಹ ಧೀಮಂತೆ ಮಹಿಳೆಯ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕಾಧ್ಯಕ್ಷ ಪಾಮಣ್ಣ ಅರಳಿಗನೂರು, ಪಪಂ ನಾಮನಿರ್ದೇಶಿತ ಸದಸ್ಯ ಶಾಂತಪ್ಪ ಬಸಗಿಡದ ಮಾತನಾಡಿದರು.
ಪಪಂ ಸದಸ್ಯ ಶೇಷಪ್ಪ ಪೂಜಾರ, ಸಣ್ಣ ಕನಕಪ್ಪ, ಪಂಪಾಪತಿ ಜಾಲಿಹಾಳ, ಸಣ್ಣ ಹನುಮಂತಪ್ಪ ಹುಲಿಹೈದರ, ಉಮೇಶ ಮ್ಯಾಗಡೆ, ಹೊನ್ನೂರು ಚಳ್ಳಮರದ, ಪಾಷಾ ಮುಲ್ಲಾರ, ಹನುಮಂತಪ್ಪ, ನಾಗೇಶ್ ಪೂಜಾರ್, ಬಸವರಾಜ್ ಚಲವಾದಿ, ಪಾಮಣ್ಣ ಚಲವಾದಿ, ವೀರೇಶ ಭಾವಿಕಟ್ಟಿ, ರಾಜು ಪೂಜಾರ್ ಸೇರಿದಂತೆ ಇತರರಿದ್ದರು.