ಜಾನಪದವು ಗ್ರಾಮೀಣ ಜನರ ಬದುಕಿನ ಭಾಗವಾಗಿದ್ದು, ಸಾಮಾಜಿಕ ಬಾಂಧವ್ಯವನ್ನು ಬೆಸೆಯುವ ಜೊತೆಗೆ ಜೀವನದ ನೀತಿ ಪಾಠವನ್ನು ಹೇಳಿಕೊಡುತ್ತದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಹಾವೇರಿ: ಜಾನಪದವು ಗ್ರಾಮೀಣ ಜನರ ಬದುಕಿನ ಭಾಗವಾಗಿದ್ದು, ಸಾಮಾಜಿಕ ಬಾಂಧವ್ಯವನ್ನು ಬೆಸೆಯುವ ಜೊತೆಗೆ ಜೀವನದ ನೀತಿ ಪಾಠವನ್ನು ಹೇಳಿಕೊಡುತ್ತದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಬಸವ ಕೇಂದ್ರ ಶ್ರೀ ಹೊಸಮಠ ಹಾಗೂ ಶೂನ್ಯ ಫೌಂಡೇಶನ್ ಹಾವೇರಿ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ಜಾನಪದ ಜಾತ್ರೆ ಸಮಾರಂಭಕ್ಕೆ ಚಕ್ಕಡಿ-ಬಂಡಿ ಓಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಾನಪದಕ್ಕೆ ಲಿಖಿತ ರೂಪವಿಲ್ಲದಿದ್ದರೂ ಮೌಖಿಕವಾಗಿ ಗ್ರಾಮೀಣ ಜನರ ಬದುಕಿನಲ್ಲಿ ಬೆಸೆದುಕೊಂಡಿದೆ. ಜನಪದ ಕಲೆ ಮತ್ತು ಸಾಹಿತ್ಯವು ಗ್ರಾಮೀಣ ಜನರ ದೈನಂದಿನ ಜೀನದಲ್ಲಿ ಹಾಸುಹೊಕ್ಕಿದ್ದು, ಸಮುದಾಯ ಸಂಸ್ಕೃತಿ, ಸಂಪ್ರದಾಯಗಳು, ನಂಬಿಕೆಗಳು ಮತ್ತು ಮೌಲ್ಯಗಳನ್ನು ಜಾನಪದ ಕಥೆಗಳು ಹಾಡುಗಳು, ಗಾದೆಗಳು, ಕಲೆಗಳು ಮತ್ತು ಆಚರಣೆಗಳ ಮೂಲಕ ಮುಂದಿನ ಪೀಳಿಗೆಗೆ ಜೀವಂತವಾಗಿರಿಸುತ್ತದೆ ಎಂದರು.ಜಾನಪದವು ಜನರ ನಡುವೆ ಭಾವನಾತ್ಮಕ ಸಂಪರ್ಕಗೊಳಿಸುವ ಮೂಲಕ ಸಾಮಾಜಿಕ ಬಾಂಧವ್ಯವನ್ನು ಬೆಸೆಯುತ್ತದೆ ಮತ್ತು ಜೀವನದ ನೀತಿ ಪಾಠವನ್ನು ಕಲಿಸಿಕೊಡುತ್ತದೆ. ಆಧುನಿಕತೆಯ ನಡೆವಯೂ ಗ್ರಾಮೀಣ ಸಂಸ್ಕೃತಿಯನ್ನು ಪೋಷಿಸಲು ಜಾನಪದ ಕಲೆ ಅಗತ್ಯವಾಗಿದೆ ಎಂದರು. ಜಾನಪದ ಜಾತ್ರೆ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಂದ ತರಕಾರಿಗಳು ಮತ್ತು ಹಣ್ಣುಗಳು, ಆಹಾರ ಕಣಜ ಹಾಗೂ ಗ್ರಾಮೀಣ ಕಲೆ ಪ್ರದರ್ಶಿಸಲಾಯಿತು.ಈ ವೇಳೆ ವಿ.ಎನ್. ಆಲದಕಟ್ಟಿ, ಪ್ರಸನ್ನ ಧಾರವಾಡಕರ, ಚೆನ್ನಬಸಪ್ಪ ಕೊಪ್ಪದ, ರಾಜ್ ನಾಯ್ಕ, ಪ್ರಕಾಶ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.