ಕಾರ್ಕಳ: ಯುವಕರು ನಿಸ್ವಾರ್ಥವಾಗಿ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸಾಧ್ಯ. ಆರೋಗ್ಯ ಸೇವೆಯ ಜೊತೆಗೆ ಜನಸೇವೆಯಲ್ಲೂ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಗೆ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ನಡೆಸುತ್ತಿರುವ ಆರೋಗ್ಯ ತಪಾಸಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ದೇವ ನಿರ್ಮಿತ ನಮ್ಮೂರಿನಲ್ಲಿ ಒತ್ತಡ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಒತ್ತಡ ರಹಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಅಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ, ಆರ್ಥಿಕ ನೆರವು, ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳ ಪರಿಸರ ಸ್ವಚ್ಛತೆ, ಮಾನವ ಸಂಪತ್ತಿನ ಅಭಿವೃದ್ಧಿ, ಮಾವಿನಕಟ್ಟೆಯ ಹೆಸರನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಾವಿನ ಗಿಡ ನೆಡುವ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದರು.ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಗೌರವ ಸಲಹೆಗಾರ, ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕರಾದ ಮಾವಿನಕಟ್ಟೆ ಶಂಕರ ಶೆಟ್ಟಿ (ಪಂಚವಟಿ, ಮುನಿಯಾಲು) ಅವರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಹೃದಯ ತಪಾಸಣೆ, ಸ್ತನ ಹಾಗೂ ಗರ್ಭಕೋಶ ತಪಾಸಣೆ, ಸಿಪಿಆರ್ ತರಬೇತಿ, ಮಧುಮೇಹ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆಗಳು ನಡೆಸಲಾಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ನೂತನ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿಗೆ ನಿವೃತ್ತ ಪೋಸ್ಟ್ ಮಾಸ್ಟರ್ ಎಳ್ಳಾರೆ ಕೆಂಜರಜಡ್ಡು ವಿಶ್ವನಾಥ ನಾಯಕ್ ಮಾಲಾರ್ಪಣೆ ಮಾಡಿದರು.
ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಆಶ್ರಯದಲ್ಲಿ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನಿಯಾಲು, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಮುದಾಯ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಈ ಸಂದರ್ಭದಲ್ಲಿ ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸತೀಶ ಪೂಜಾರಿ ಮುಳ್ಕಾಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಮೇಲ್ವಿಚಾರಕಿ ಸುಮಲತಾ, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ. ಸೌಮ್ಯ, ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಾದ ಡಾ. ವೃಂದಾಲತ್, ಡಾ. ವಿಧಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಪ್ರತಿನಿಧಿ ಸ್ವಾತಿ, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶಿಕ್ಷಕಿ ಶೃತಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಸೇವಾ ಪ್ರತಿನಿಧಿ ಚಿತ್ರಾ ಸೇರಿದಂತೆ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪದಾಧಿಕಾರಿಗಳು, ವಿವಿಧ ಗಣ್ಯರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.ಮುನಿಯಾಲು ಕೆಪಿಎಸ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಣೆ ಮಾಡಿದರು. ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.