ನಾಳೆಯಿಂದ ಎರಡು ದಿನ ಪಟ್ಟಣದ ಶಕ್ತಿದೇವತೆ ಬಡಗೂಡಮ್ಮದೇವಿ ಕೊಂಡೋತ್ಸವ

KannadaprabhaNewsNetwork |  
Published : Apr 02, 2026, 01:45 AM IST
1ಕೆಎಂಎನ್ ಡಿ31 | Kannada Prabha

ಸಾರಾಂಶ

ಹಬ್ಬಕ್ಕೆ ವಾರದ ಮುಂಚೆ ಮಾ.27ರ ಶುಕ್ರವಾರ ರಾತ್ರಿ ಪಟ್ಟಣದ ಹಂಪೆ ಅರಸನ ಕೊಳದಲ್ಲಿನ ಗಂಗಾಪೂಜೆಯೊಂದಿಗೆ ಪೂಜಾರಿಕೆ ಹಕ್ಕುಳ್ಳ ಗಂಗಾಮತಸ್ಥ ಸಮುದಾಯದ ಆಯ್ದ ಕುಟುಂಬಗಳ ಪೈಕಿಯ ಪ್ರೌಢಾವಸ್ಥೆಗೆ ಬಾರದ ಚಿಕ್ಕ ಬಾಲಕಿ ಹೊರಬಹುದಾದ ಅಡಿಕೆ ಹೊಂಬಾಳೆಯೊಂದಿಗೆ ಹತ್ತಿ ಕೊನೆ ಕಂಭ ಹಾಕಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳ ಗ್ರಾಮದೇವತೆ ಮತ್ತು ಊರಹಬ್ಬದ ಸಾಲಿನ ಪೈಕಿ ಕೊನೆಯಲ್ಲಿ ನಡೆಯುವ ಪಟ್ಟಣದ ಶಕ್ತಿದೇವತೆ ಶ್ರೀ ಬಡಗೂಡಮ್ಮದೇವಿಯ ಕೊಂಡೋತ್ಸವ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಏ.3ರ ಶುಕ್ರವಾರ ಮತ್ತು ಏ.4 ಶನಿವಾರ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಹಬ್ಬಕ್ಕೆ ವಾರದ ಮುಂಚೆ ಮಾ.27ರ ಶುಕ್ರವಾರ ರಾತ್ರಿ ಪಟ್ಟಣದ ಹಂಪೆ ಅರಸನ ಕೊಳದಲ್ಲಿನ ಗಂಗಾಪೂಜೆಯೊಂದಿಗೆ ಪೂಜಾರಿಕೆ ಹಕ್ಕುಳ್ಳ ಗಂಗಾಮತಸ್ಥ ಸಮುದಾಯದ ಆಯ್ದ ಕುಟುಂಬಗಳ ಪೈಕಿಯ ಪ್ರೌಢಾವಸ್ಥೆಗೆ ಬಾರದ ಚಿಕ್ಕ ಬಾಲಕಿ ಹೊರಬಹುದಾದ ಅಡಿಕೆ ಹೊಂಬಾಳೆಯೊಂದಿಗೆ ಹತ್ತಿ ಕೊನೆ ಕಂಭ ಹಾಕಲಾಯಿತು.

ಏ.1 ರಂದು ರಾತ್ರಿ ಹೂವಿನಚಪ್ಪರದ ಅಂಗವಾಗಿ ಅಮ್ಮನವರ ಉತ್ಸವ ಮೂರ್ತಿಯನ್ನು ಪಟ್ಟಣದ ಒಳ ಸುತ್ತಿನ ಮೆರವಣಿಗೆ ಮತ್ತು ಏ.2 ರಂದು ಗುರುವಾರ ಇಡೀ ರಾತ್ರಿ ಉಪ್ಪಾರಹಳ್ಳಿ, ಜೋಡಿನೆರಲಕೆರೆ, ಹುಲ್ಲೇಕೆರೆ, ಬೀರೇಶ್ವರಪುರ, ಕಲ್ಲಿನಾಥಪುರ ಮತ್ತು ಕೆ.ಮಲ್ಲೇನಹಳ್ಳಿ ಗ್ರಾಮಸ್ಥರು ಮುಂಗೋಳಿ ರಂಗದ ಕುಣಿತದಲ್ಲಿ ಪಾಲ್ಗೊಳ್ಳುವುದು ಸಾಂಪ್ರದಾಯಿಕ ಆಚರಣೆಯಾಗಿದೆ.

ಏ.3ರ ಶುಕ್ರವಾರ ಹಬ್ಬದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಹೋಮ-ಹವನಾದಿಗಳು ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ವಿಪ್ರ ಸಮಾಜದವತಿಯಿಂದ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕಾದಿ ಪ್ರಥಮ ಪೂಜೆ ವೇದಘೋಷಗಳೊಂದಿಗೆ ನಡೆಯುವುದು ಹಬ್ಬದ ಆಚರಣೆಯ ಧಾರ್ಮಿಕ ಕೈಂಕರ್ಯಗಳ ಸರತಿಯಲ್ಲಿನ ವಿಶೇಷ.

ಕೊಂಡೋತ್ಸವಕ್ಕೆ ಚಾಲನೆ:

ಅಮ್ಮನವರ ತವರುಮನೆಯೆಂದೇ ಕರೆಯಲ್ಪಡುವ ಉಪ್ಪಾರಹಳ್ಳಿ ಗ್ರಾಮಸ್ಥರಿಂದ ಇಂದು ಶುಕ್ರವಾರ ಸಂಜೆ ಪೂಜಾ ಕಾರ್ಯಕ್ರಮಗಳೊಂದಿಗೆ ಕೊಂಡೋತ್ಸವಕ್ಕೆ ಅಗ್ನಿಸ್ಪರ್ಷ ಮಾಡಲಾಗುವುದು. ಸಂಪ್ರದಾಯದಂತೆ ಪಟ್ಟಣದ ಮಡಿವಾಳ ಮತ್ತು ಒಕ್ಕಲಿಗ ಸಮುದಾಯಗಳ ಜೊತೆಗೆ ಬದ್ರಿಕೊಪ್ಪಲು, ಮುದ್ದೇಗೌಡನಕೊಪ್ಪಲು, ಸಾರಿಮೆಗಲಕೊಪ್ಪಲು, ಗೊಲ್ಲರಕೊಪ್ಪಲು, ಕೆಂಚೇಗೌಡನಕೊಪ್ಪಲು ಹಾಗೂ ಮದಲಹಳ್ಳಿ ಸೇರಿದಂತೆ ಹಲವು ಗ್ರಾಮಸ್ಥರು ಕುರ್ಜು ಬಂಡಿ ಕಟ್ಟುವುದು, ರಥದ ಜೋಡಣೆ ಮತ್ತು ರಥೋತ್ಸವದ ನಿರ್ವಹಣೆ ಮಾಡುವರು.

ರಥೋತ್ಸವ:

ಏ.4ರ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಪಟ್ಟಣದಿಂದ ಹೊರಡುವ ಅಮ್ಮನವರ ಪಾಲಕಿ ಉತ್ಸವ ತಮಟೆ, ನಗಾರಿ, ಪೂಜೆ ಕುಣಿತ, ಸೋಮನ ಕುಣಿತ ಹಾಗೂ ಪಟದ ಕುಣಿತಗಳೊಂದಿಗೆ ಸಂಜೆ 4ರ ವೇಳೆಗೆ ಟಿ.ಬಿ.ಬಡಾವಣೆಯ ಮೂಲ ಸನ್ನಿಧಿ ತಲುಪಲಿದೆ. ಸ್ಥಳಶುದ್ದಿ ಹಾಗೂ ಬಲಿಪೂಜೆಯಂತಹ ಧಾರ್ಮಿಕ ಕೈಂಕರ್ಯಗಳು ಜರುಗಿದ ನಂತರ ಗೋಧೂಳಿ ಲಗ್ನದಲ್ಲಿ ಅಮ್ಮನವರ ಮಹಾರಥೋತ್ಸವ ನಡೆಯಲಿದೆ. ಸಹಸ್ರಾರು ಸಂಖ್ಯೆಯ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ