ಗರುಡ ಗ್ಯಾಂಗ್ ವಾರ್: ಮತ್ತೆ ಮೂವರ ಬಂಧನ

KannadaprabhaNewsNetwork | Published : May 27, 2024 1:08 AM

ಸಾರಾಂಶ

ಈ ಹಿಂದೆ 3 ಮಂದಿಯನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಹೊಡೆದಾಟದಲ್ಲಿ ಒಟ್ಟು 7 ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ಇನ್ನೊಬ್ಬನ ಬಂಧನವಾಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಇತಿಹಾಸಕ್ಕೆ ಮಸಿ ಬಳಿಯುವಂತೆ, ರಾಜಕೀಯ ಪಕ್ಷಗಳ ಪರಸ್ಪರ ಆರೋಪಕ್ಕೆ ಕಾರಣವಾಗಿರುವ, ವಾರದ ಹಿಂದೆ ನಗರದ ಕುಂಜಿಬೆಟ್ಟು ರಾ.ಹೆ.ಯಲ್ಲಿ ನಡೆದ ತಲವಾರ್ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಈ ಹಿಂದೆ 3 ಮಂದಿಯನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಹೊಡೆದಾಟದಲ್ಲಿ ಒಟ್ಟು 7 ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ಇನ್ನೊಬ್ಬನ ಬಂಧನವಾಗಬೇಕಾಗಿದೆ.

ವ್ಯವಹಾರದ ವೈಮನಸ್ಸಿನಿಂದ ಆಶೀಕ್ ಮತ್ತು ಅಲ್ಫಾಜ್ ಎಂಬವರ ನೇತೃತ್ವದ ಇಬ್ಭಾಗವಾಗಿರುವ ನಟೋರಿಯಸ್ ಗರುಡ ಗ್ಯಾಂಗ್‌ನ ಎರಡು ತಂಡಗಳು ಮೇ 20ರಂದು ಮಧ್ಯರಾತ್ರಿ ರಾ.ಹೆ.ಯಲ್ಲಿ ಎರಡು ಕಾರುಗಳಲ್ಲಿ ಬಂದು ಪರಸ್ಪರ ಡಿಕ್ಕಿ ಹೊಡೆದು, ನಂತರ ತಲವಾರು, ದೊಣ್ಣೆ, ಡ್ರ್ಯಾಗರ್‌ಗಳನ್ನು ಹಿಡಿದುಕೊಂಡು ಅಟ್ಟಾಡಿಸಿ ಹಲ್ಲೆ ನಡೆಸಿದ್ದರು.

ಈ ಘಟನೆಯಲ್ಲಿ ಕಾರು ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಗೆ ಬಿದ್ದು, ನಂತರ ತಲವಾರು ಏಟು ತಿಂದಿದ್ದ ಬ್ರಹ್ಮಾವರ ನಿವಾಸಿ ಶರೀಫ್ (36), ಕಾಪುವಿನ ಮಜೀದ್ (25) ಮತ್ತು ಅಲ್ತಾಫ್ (26) ಎಂಬವರನ್ನು ಭಾನುವಾರ ಬಂಧಿಸಲಾಗಿದೆ.

ಶನಿವಾರ ಕಾಪು ಕೊಂಬುಗುಡ್ಡೆ ನಿವಾಸಿ ಆಶಿಕ್ (26), ಹೂಡೆ ನಿವಾಸಿ ರಾಕೀಬ್ (21) ಮತ್ತು ಸಕ್ಲೈನ್ (26) ಅವರನ್ನು ಬಂಧಿಸಲಾಗಿತ್ತು.

* ಗಾಂಜಾ ನಶೆಯಲ್ಲಿದ್ದರು

ರಾಜಿ ಸಂಧಾನದ ಮೂಲಕ ವೈಮನಸ್ಸು ಸರಿಪಡಿಸಿಕೊಳ್ಳಲೆಂದು ಆಶೀಕ್ ತಂಡವನ್ನು ಅಲ್ಫಾಜ್ ತಂಡ ಕರೆಸಿದ್ದರು. ಎರಡು ತಂಡಗಳು ಕಾರಿನಲ್ಲಿ ಬಂದಿದ್ದರು. ಆದರೆ ಗಾಂಜಾ ನಶೆಯಲ್ಲಿದ್ದ ಈ ಪುಡಿ ರೌಡಿಗಳು ರಾಜಿ ಮರೆತು ಪರಸ್ಪರ ಹೊಡೆದಾಡಿಕೊಂಡಿದ್ದು ತನಿಖೆಯಿಂದ ಬಹಿರಂಗವಾಗಿದೆ. ಈ ಗ್ಯಾಂಗ್ ಮೇಲೆ ಗಾಂಜಾ ವ್ಯವಹಾರದ ಆರೋಪವೂ ಇದೆ.

* ಪೊಲೀಸರ ಮೇಲೆ ಹಲ್ಲೆ

ಆಶೀಕ್ ಅನೇಕ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿ. ಈತ ಮತ್ತು ಇಸಾಕ್ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ದರೋಡೆಗೆ ಸಂಬಂಧಿಸಿ, ಬಂಧಿಸಲ್ಪಟ್ಟಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಆಗ ಪೊಲೀಸರು ಅವರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದರು.

* 20-35 ವಯಸ್ಸಿನ ರೌಡಿಗಳು

ಕಳೆದ ಹತ್ತು ವರ್ಷಗಳಿಂದ ಒಂದು ಸಮುದಾಯಕ್ಕೆ ಸೇರಿರುವ 20-35 ವರ್ಷದೊಳಗಿನ ನಟೋರಿಯಸ್ ಯುವಕರು ಸೇರಿ, ತಮ್ಮ ತಂಡಕ್ಕೆ ಗರುಡ ಎಂಬ ಹೆಸರನ್ನಿಟ್ಟುಕೊಂಡು ಅಪರಾಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಸುಮಾರು 20 ಮಂದಿ ಇರುವ ಈ ಗ್ಯಾಂಗ್ ಮೇಲೆ ಗಾಂಜಾ ಸಾಗಾಟ, ಮಾರಾಟ, ದರೋಡೆ, ಗೋಕಳ್ಳಸಾಗಣೆ, ಬೆದರಿಕೆ, ಶೂಟೌಟ್ ನಂತಹ 20ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿವೆ.

ಜಿಲ್ಲೆಯಲ್ಲಿ ಎರಡೆರೆಡು ಚುನಾವಣೆಗಳು ನಡೆಯುತ್ತಿದ್ದರೂ ಅವರನ್ನು ಪರೇಡ್ ಆಗಲಿ ಗಡಿಪಾರಾಗಲಿ ಮಾಡದಿರುವ ಪೊಲೀಸ್ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಬಿಜೆಪಿಯಂತೂ ರಾಜ್ಯ ಕಾಂಗ್ರೆಸ್ ಸರ್ಕಾರ, ಗೃಹ ಇಲಾಖೆಯನ್ನು ಟೀಕಿಸುವುದಕ್ಕೆ ಈ ಘಟನೆಯನ್ನು ಅಸ್ತ್ರವನ್ನಾಗಿಸಿದೆ.

Share this article