ಕಾರಟಗಿ: ತುಂಗಭದ್ರಾ ನದಿ ಪಾತ್ರದ ಜನರಿಗೆ ಕುಡಿವ ನೀರು ತಡೆಗಟ್ಟಿದ್ದ ವಿದ್ಯುತ್ ಕಂಪನಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿ ಗೇಟ್ ಎತ್ತರಿಸಿ ನೀರು ಹರಿಸಿಕೊಂಡ ಘಟನೆ ನದಿ ಪಾತ್ರದಲ್ಲಿ ಗುರುವಾರ ನಡೆದಿದೆ.
ಈ ವೇಳೆ ಮಾತನಾಡಿದ ಕಕ್ಕರಗೋಳ ಗ್ರಾಮದ ಮುಖಂಡ ಶರಣಪ್ಪ ಸಾಹುಕಾರ, ಮಳೆಯಾಗದ್ದರಿಂದ ನದಿಯಲ್ಲಿ ಕುಡಿಯಲು ಹನಿ ನೀರು ಇಲ್ಲ.ಜನ, ಜಾನುವಾರುಗಳಿಗೆ ಹಾಗೂ ಜಲಚರಗಳ ರಕ್ಷಣೆಯ ನಿಟ್ಟಿನಲ್ಲಿ ಸರ್ಕಾರವು ಅಲ್ಪಸ್ವಲ್ಪ ನೀರು ಕಾಲುವೆಯ ಎಸ್ಕೇಪ್ ಮೂಲಕ ಬಿಡುಗಡೆ ಮಾಡಿದೆ. ಆದರೆ ಖಾಸಗಿ ವಿದ್ಯುತ್ ಕಂಪನಿಯವರು ತಮ್ಮ ಸ್ವಾರ್ಥಕ್ಕಾಗಿ ಗೇಟ್ ಹಾಕಿ ನೀರು ತಡೆದಿರುವುದು ಎಷ್ಟರ ಮಟ್ಟಿಗೆ ಸರಿ? ಕುಡಿವ ನೀರನ್ನು ತಡೆಯಲು ಕಂಪನಿಗೆ ಯಾವ ಅಧಿಕಾರ ಇದೆ. ಇವಯ್ಯಾರು ನೀರು ತಡೆಯಲಿ? ಕೂಡಲೇ ಗೇಟ್ ಎತ್ತಿ ಕೆಳಭಾಗಕ್ಕೆ ನೀರು ಹರಿಸಬೇಕು. ಇಲ್ಲವಾದರೆ ನಾವೇ ಗೇಟ್ ಒಡೆದು ನೀರು ಹರಿಸಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮತ್ತು ಪರಿಸ್ಥಿತಿ ಕೈಮೀರುವ ಸೂಚನೆ ಸಿಗುತ್ತಿದ್ದಂತೆಯೇ ವಿದ್ಯುತ್ ಘಟಕದ ತಾಂತ್ರಿಕ ಅಧಿಕಾರಿ ಶಿವಪುತ್ರಪ್ಪ ತಕ್ಷಣವೇ ಸ್ಥಳಕ್ಕೆ ಧಾವಿಸಿ ರೈತರ ತೀವ್ರ ಆಕ್ರೋಶ ಹಾಗೂ ಮನವಿಗೆ ಸ್ಪಂದಿಸಿದ ಅಧಿಕಾರಿ ಮೂರು ಗೇಟ್‌ಗಳ ಪೈಕಿ ಒಂದು ಗೇಟ್ ಎತ್ತಿ ತಕ್ಷಣವೇ ಕೆಳಭಾಗಕ್ಕೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿದರು. ಅಧಿಕಾರಿಗಳು ನೀರು ಬಿಟ್ಟ ನಂತರವೇ ರೈತರು ತಮ್ಮ ಪ್ರತಿಭಟನೆ ಹಿಂಪಡೆದರಾದರೂ ಮುಂಬರುವ ದಿನಗಳಲ್ಲಿ ಮತ್ತೆ ನೀರು ತಡೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ನದಿಪಾತ್ರದ ನಂದಿಹಳ್ಳಿ, ರುದ್ರಪಾದ, ಕಕ್ಕರಗೋಳ, ಶ್ಯಾಲಿಗನೂರು, ಸೂಗೂರು, ನಿಟ್ಟೂರು, ನಡೀವಿ, ಉಡೆಗೋಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರಿದ್ದರು.