ಕನ್ನಡಪ್ರಭ ವಾರ್ತೆ ರಾಮನಗರಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯ ನಿರ್ವಹಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ 2 ಬಾರಿ ನೋಟಿಸ್ ನೀಡಿದರೂ ತಲೆ ಕೆಡಿಸಿಕೊಳ್ಳದ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, ನಿಯಮ ಉಲ್ಲಂಘನೆ ಮೇರೆಗೆ ಸೀಜ್ ಆದ ಬಳಿಕ ತಣ್ಣಗಾಗಿದೆ. ಬೀಗ ಮುದ್ರೆ ತೆಗೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಮಂಡಳಿಯ ಅಧಿಕಾರಿಗಳು, ತಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ಕೋರಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ನಾವು ಪಾಲಿಸಿದ್ದೇವೆ. ನಿಮ್ಮ ಮನವಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡುತ್ತೇನೆ. ನೀವು ಮಂಡಳಿಗೆ ಹೋಗಿ ಮನವಿ ಮಾಡಿ. ನಿರ್ಧಾರ ತೆಗೆದುಕೊಳ್ಳುವುದು ಮಂಡಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.
ಶೋ ಮತ್ತೆ ಪ್ರಸಾರವಾಗುತ್ತಾ?: ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಗ್‌ಬಾಸ್ ಶೋನ ಭವಿಷ್ಯ ನಿಂತಿದೆ. ವಾಸ್ತವವಾಗಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದಕ್ಕೂ, ಬಿಗ್ ಬಾಸ್ ಶೋಗೂ ನೇರ ಸಂಬಂಧ ಇರಲಿಲ್ಲ. ಆದರೆ, ಸ್ಟುಡಿಯೋ ಬಂದ್ ಆಗಿದ್ದರಿಂದ ಶೋಗೂ ಅಡಚಣೆ ಉಂಟಾಗಿತ್ತು. ಈಗ 15 ದಿನಗಳ ಕಾಲಾವಕಾಶ ಸಿಕ್ಕರೆ, ಶೋ ಶೀಘ್ರದಲ್ಲಿಯೇ ಪುನಾರಂಭವಾಗುವ ಸಾಧ್ಯತೆ ಇದೆ.(ಬಾಕ್ಸ್):ಈಗಲ್ ಟನ್ ರೆಸಾರ್ಟ್ ಖಾಲಿ ಮಾಡಿದ ಸ್ಪರ್ಧಿಗಳು!
‘ಬಿಗ್‌ಬಾಸ್ ಕಾರ್ಯಕ್ರಮ, ಜಾಲಿವುಡ್ ಸ್ಟುಡಿಯೋ ಪ್ರಕರಣದ ವಿಚಾರದಲ್ಲಿ ಏಕಾಏಕಿ ಯಾಕೆ ಕ್ರಮ ಕೈಗೊಂಡಿರಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಬೈದಿದ್ದೇನೆ. ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದೇನೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಿಚ್ಚ ಸುದೀಪ್ ವಿರುದ್ಧದ ಸೇಡಿಗೆ ಈ ರೀತಿ ಮಾಡಿದ್ದೀರಿ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ರಾಜಕೀಯವಾಗಿ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಆತ ನಮ್ಮ ಹುಡುಗ (ಸುದೀಪ್) ಆ ಹೆಣ್ಣು ಮಗಳು (ಸುದೀಪ್ ಪತ್ನಿ) ಕೂಡ ನಮ್ಮ ಮನೆಗೆ ಬಂದಿದ್ದರು. ಯಾರೋ ಕೆಲವರಿಗೆ ಹೇಳಿ ಈ ರೀತಿಯ ಷಡ್ಯಂತ್ರ ಮಾಡಿಸುತ್ತಿದ್ದಾರೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾಡಳಿತವು ‘ಬಿಗ್ ಬಾಸ್’ ರಿಯಾಲಿಟಿ ಶೋ ಬಂದ್ ಮಾಡಿಸಿದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ಪಕ್ಷವು ಟಾಂಗ್ ನೀಡಿದೆ.
ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನಿಸಲಾಗಿದೆ.ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ? ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ? ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ? ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ ಎಂದು ಪ್ರಶ್ನಿಸಲಾಗಿದೆ.ಬಿಗ್‌ಬಾಸ್‌ಗೆ ಬೀಗ ಪ್ರಶ್ನಿಸಿ ಅರ್ಜಿ: ಇಂದು ಹೈಕೋರ್ಟಲ್ಲಿ ವಿಚಾರಣೆ?
ಅರ್ಜಿಯಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಕೆಎಸ್‌ಪಿಸಿಬಿ ಅಧ್ಯಕ್ಷ, ಪರಿಸರ ಅಧಿಕಾರ, ರಾಮನಗರ ಜಿಲ್ಲಾಧಿಕಾರಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ರಾಮನಗರ ಜಿಲ್ಲಾ ಲೋಕೋಪಯೋಗಿ ಕಚೇರಿ ಕಾರ್ಯಕಾರಿ ಎಂಜಿನಿಯರ್ ಅವರನ್ನು ಪ್ರತಿವಾದಿ ಮಾಡಲಾಗಿದೆ.ಬುಧವಾರ ಬೆಳಗ್ಗೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಆರ್.ನಟರಾಜ್ ಅವರ ಪೀಠದ ಮುಂದೆ ಹಾಜರಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು. ದಿನದ ಎಲ್ಲ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ. ಸಂಜೆ ಕಲಾಪ ಮುಗಿದ ನಂತರ ಕಾಲಾವಕಾಶದ ಕೊರತೆ ಕಾರಣ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲಿಲ್ಲ.ಪಾರ್ಕ್‌ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಸೇರಿ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ನಡೆಯುತ್ತದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು ಎರಡು ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯ್ದೆ ವಿರುದ್ಧವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರೀಕರಣ ನಡೆಯುತ್ತಿರುವ ಸ್ಥಳ ಬಿಗ್ ಬಾಸ್ ಸ್ಪರ್ಧಿಗಳು ನೆಲೆಸುವ ತಾಣವಾಗಿದೆಯೇ ಹೊರತು ಕೈಗಾರಿಕಾ ಪ್ರದೇಶವಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.ಅಲ್ಲದೆ, ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯ್ದೆಯ ಸೆಕ್ಷನ್ 2(ಡಿ) ಅಡಿ ಪರಿಸರ ಮಾಲಿನ್ಯ ಎಂದಾದರೆ ಮನುಷ್ಯನ ಬದುಕಿಗೆ ಎರವಾಗುವ ಅಂಶ ಇರಬೇಕು. ಇದಕ್ಕೆ ಪ್ರಯೋಗಾಲಯದ ದತ್ತಾಂಶ/ಕ್ಲಿನಿಕಲ್ ಪರೀಕ್ಷೆ ಪೂರಕವಾಗಿರಬೇಕು. ಇಂತಹ ಯಾವುದೇ ಅಂಶವಿಲ್ಲದಿದ್ದರೂ ನಿರ್ದಿಷ್ಟ ಗುರಿ ಇಟ್ಟುಕೊಂಡಿರುವ ಪಾರ್ಕ್‌ಗೆ ಬೀಗ ಹಾಕಲು ಮಾಡಿರುವ ಆದೇಶ ರದ್ದುಪಡಿಸಬೇಕು ಎಂದು ಸಂಸ್ಥೆ ಕೋರಿದೆ.