ಸಾಲದ ನೆಪದಲ್ಲಿ ಚಿನ್ನದ ಅರ್ಧ ದುಡ್ಡು ನೀಡಿ ಪಂಗನಾಮ!

KannadaprabhaNewsNetwork |  
Published : Nov 05, 2025, 04:15 AM IST
Police

ಸಾರಾಂಶ

ಶೂನ್ಯ ಬಡ್ಡಿ ಚಿನ್ನ ಸಾಲ ಯೋಜನೆಯ ಹೆಸರಿನಲ್ಲಿ ಜನರಿಗೆ ವಂಚಿಸಿ ಕೋಟ್ಯಂತರ ರು. ಮೌಲ್ಯದ ಚಿನ್ನ ದೋಚಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಲಾಮ್‌ ಹಾಗೂ  ಅಜಿತ್ ಬಂಧಿತರಾಗಿದ್ದು,   ಒಟ್ಟು 1.80 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ

  ಬೆಂಗಳೂರು :  ಶೂನ್ಯ ಬಡ್ಡಿ ಚಿನ್ನ ಸಾಲ ಯೋಜನೆಯ ಹೆಸರಿನಲ್ಲಿ ಜನರಿಗೆ ವಂಚಿಸಿ ಕೋಟ್ಯಂತರ ರು. ಮೌಲ್ಯದ ಚಿನ್ನ ದೋಚಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯದ ಸಲಾಮ್‌ ಹಾಗೂ ವಿದ್ಯಾರಣ್ಯಪುರದ ಅಜಿತ್ ಬಂಧಿತರಾಗಿದ್ದು, ಆರೋಪಿಗಳಿಂದ 1.478 ಕೆಜಿ ಚಿನ್ನ ಹಾಗೂ 5 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 1.80 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಶೂನ್ಯ ಬಡ್ಡಿ ಹೆಸರಿನಲ್ಲಿ ತಾವು ಅಡಮಾನವಿಟ್ಟಿದ್ದ ಚಿನ್ನವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಜುಬೇರ್ ಎಂಬಾತ ದೂರು ನೀಡಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ಮೇಲುಸ್ತುವಾರಿಯ ಆರ್ಥಿಕ ಅಪರಾಧ ವಿಭಾಗದ ಎಸಿಪಿ ನಾಗರಾಜ್ ಹಾಗೂ ಇನ್ಸ್‌ಪೆಕ್ಟರ್ ಸಂತೋಷ್ ರಾಮ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ವಂಚನೆ ಕೃತ್ಯಗಳು ಬಯಲಾಗಿವೆ.

ದುಬೈ ರಿರ್ಟನ್‌ ಮಾಡಿದ ವಂಚನೆ

ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಕೇರಳದ ಕಾಸರಗೋಡಿನ ಸಲಾಮ್, ಕೊರೋನಾ ಕಾಲದಲ್ಲಿ ತವರಿಗೆ ಮರಳಿದ್ದ. ಬಳಿಕ ಶೂನ್ಯ ಬಡ್ಡಿಗೆ ಚಿನ್ನ ಸಾಲ ನೀಡುತ್ತಿದ್ದ ಚಿನ್ನಾಭರಣ ಅಂಗಡಿಗೆ ಮಧ್ಯವರ್ತಿಯಾಗಿದ್ದ. ಇದೇ ಅಂಗಡಿಯಲ್ಲಿ ಅಜಿತ್ ಸಹ ಮಧ್ಯವರ್ತಿಯಾಗಿದ್ದ. ಒಂದೆಡೆ ಕೆಲಸ ಮಾಡುತ್ತಿದ್ದ ಅವರಿಬ್ಬರಿಗೆ ಒಡನಾಟ ಬೆಳದಿದೆ. ಆ ಅಂಗಡಿಯವರು ಸಹ ಶೂನ್ಯ ಬಡ್ಡಿ ಹೆಸರಿನಲ್ಲಿ ಜನರಿಂದ ಚಿನ್ನ ಪಡೆದು ಬಳಿಕ ವಂಚಿಸುತ್ತಿದ್ದರು. ಕಾಲ ಕಳೆದಂತೆ ಜನರನ್ನು ಮೋಸಗೊಳಿಸುವ ಕೃತ್ಯವನ್ನು ಕರಗತ ಮಾಡಿಕೊಂಡ ಅಜಿತ್ ಹಾಗೂ ಸಲಾಮ್‌, ಅಲ್ಲಿ ಕೆಲಸ ತೊರೆದು ತಾವೇ ಅಂಗಡಿ ತೆರೆದರು. ಅಂತೆಯೇ ಬಡ್ಡಿ ಇಲ್ಲದೆ ಸಾಲ ಕೊಟ್ಟು ಜನರಿಂದ ಚಿನ್ನ ಪಡೆದು ಇಬ್ಬರು ಕೇರಳ ತೊರೆದಿದ್ದರು.

ನಂತರ ಬೆಂಗಳೂರಿಗೆ ಬಂದ ಆರೋಪಿಗಳು, ಬಳಿಕ ವಿದ್ಯಾರಣ್ಯಪುರ ಸಮೀಪ ಅಂಗಡಿ ತೆರೆದರು. ಇಲ್ಲಿ ಸಹ ಸಾರ್ವಜನಿಕರಿಗೆ ವಂಚನೆಗೊಳಿಸಲು ಇದೇ ಶೂನ್ಯ ಬಡ್ಡಿ ತಂತ್ರ ಪ್ರಯೋಗಿಸಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸೆರೆಯಾಗಿದ್ದು ಹೇಗೆ?

ಶೂನ್ಯ ಬಡ್ಡಿ ಸಾಲ ಯೋಜನೆಯಡಿ 11 ತಿಂಗಳಿಗೆ ಜನರಿಗೆ ಆರೋಪಿಗಳು ಸಾಲ ಕೊಡುತ್ತಿದ್ದರು. ಅಲ್ಲದೆ ಚಿನ್ನದ ಮೌಲ್ಯದ ಶೇ.50 ರಿಂದ 60 ರಷ್ಟು ಮಾತ್ರ ಜನರಿಗೆ ಸಾಲ ರೂಪದಲ್ಲಿ ಹಣ ವಿತರಿಸುತ್ತಿದ್ದರು. ನಿಗದಿತ ಅವಧಿಯಲ್ಲಿ ಸಾಲ ಮರಳಿಸದೆ ಹೋದರೆ ಚಿನ್ನವನ್ನು ಸಲಾಮ್ ಹಾಗೂ ಅಜಿತ್ ಲಪಾಟಾಯಿಸುತ್ತಿದ್ದರು. ಈ ಚಿನ್ನವನ್ನು ಎಚ್‌ಬಿಆರ್ ಲೇಔಟ್‌ನಲ್ಲಿದ್ದ ವ್ಯಾಪಾರಿಗೆ ಶೇ.40 ರಿಂದ 50 ರಷ್ಟು ಲಾಭಕ್ಕೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಆ ಚಿನ್ನವನ್ನು ಆತ ಕರಗಿಸಿ ಬಿಸ್ಕೆಟ್ಸ್‌ ಮಾಡುತ್ತಿದ್ದ. ಇನ್ನು ಚಿನ್ನ ಬಡ್ಡಿ ಸಾಲ ಯೋಜನೆಗೆ ಎಚ್‌ಬಿಆರ್ ಲೇಔಟ್‌ ವ್ಯಾಪಾರಿಯೇ ಹಣ ಕೊಡುತ್ತಿದ್ದ. ಕೆಲ ದಿನಗಳು ಅಂಗಡಿ ತೆರೆದು ಚಿನ್ನ ಸಂಗ್ರಹಿಸಿ ಬಳಿಕ ಬಾಗಿಲು ಬಂದ್ ಮಾಡಿ ಜಾಗ ಖಾಲಿ ಮಾಡುತ್ತಿದ್ದರು. ಅಂತೆಯೇ ವಿದ್ಯಾರಣ್ಯಪುರದ ಜುಬೇರ್‌ಗೆ ಸಹ ಆರೋಪಿಗಳು ಟೋಪಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ಟಾರ್ಗೆಟ್‌:

ಇಸ್ಲಾಂ ಧರ್ಮದಲ್ಲಿ ಬಡ್ಡಿಗೆ ಸಾಲ ಕೊಡುವುದು ನಿಷೇಧವಿದ್ದು, ಇದು ಧರ್ಮಬಾಹಿರ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಶೂನ್ಯ ಬಡ್ಡಿ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ವಂಚಿಸಿದ್ದರು. ಇದೇ ರೀತಿ ಕೇರಳ ಹಾಗೂ ಮಂಗಳೂರಿನಲ್ಲಿ ಸಹ ಆರೋಪಿಗಳು ಮೋಸಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

4 ಕೋಟಿ ಮೌಲ್ಯದ ಚಿನ್ನ ವಂಚನೆ

ಇದುವರೆಗೆ ಜನರಿಗೆ 4 ಕೋಟಿ ರು. ಮೌಲ್ಯದ ಚಿನ್ನ ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳಿಂದ 1.8 ಕೋಟಿ ರು. ಮೌಲ್ಯದ ಚಿನ್ನ ಜಪ್ತಿಯಾಗಿದ್ದು, ಇನ್ನುಳಿದ ಚಿನ್ನಕ್ಕೆ ತನಿಖೆ ನಡೆದಿದೆ ಎಂದು ಸಿಸಿಬಿ ಹೇಳಿದೆ.

ಚಿನ್ನವನ್ನು ಅಡಮಾನವಿಡುವ ಮುನ್ನ ಆ ಸಂಸ್ಥೆಯ ಕುರಿತು ಪೂರ್ವಾಪರವನ್ನು ಜನರು ಪರಿಶೀಲಿಸಬೇಕು. ಈ ರೀತಿಯ ಶೂನ್ಯ ಬಡ್ಡಿ ಹೆಸರಿನ ಸುಳ್ಳು ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳಬಾರದು. ಇಂಥ ಶಂಕಾಸ್ಪದ ಯೋಜನೆಗಳ ಬಗ್ಗೆ ತಿಳಿದ ಕೂಡಲೇ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.

-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ