ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಎಂದು ಗಣ್ಯರು ಮಾಹಿತಿ ನೀಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೃಷಿ ಸಂಶೋಧನ ವಿಭಾಗದಿಂದ ಶಿಫಾರಸ್ಸು ಮಾಡಿದ ಕೀಟನಾಶಕ, ಶೀಲೀಂದ್ರನಾಶಕಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸಿ ಸಂರಕ್ಷಣಾ ವಿಭಾಗದ ವಿಜ್ಞಾನಿ ವೀರೇಂದ್ರ ಕುಮಾರ್ ಹೇಳಿದರು.ಕೇಂದ್ರ ಸರ್ಕಾರದ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ಕೃಷಿ ಇಲಾಖೆ ಹಾಗು ಗೌಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗೌಡಳ್ಳಿ ಶ್ರೀನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಬೀಜೋಪಚಾರ ಆಂದೋಲನ ಹಾಗು ಸುರಕ್ಷಿತ ಕೀಟನಾಶಕ ಬಳಕೆ’ ಕೃಷಿಕರ ಕಾರ್ಯಾಗಾರದಲ್ಲಿ ಮಾತನಾಡಿದರು. ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡಿದರೆ ಉತ್ತಮ ಫಸಲು ಪಡೆಯಬಹುದು.ಕಳಪೆ ಗುಣಮಟ್ಟದ ಗೊಬ್ಬರ, ಕೀಟನಾಶಕಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೃಷಿಕರು ಮೋಸ ಹೋಗಬಾರದು ಎಂದು ಕಿವಿಮಾತು ಹೇಳಿದರು. ಕೃಷಿ, ತೋಟಗಾರಿಕಾ, ಸಂಬಾರ ಮಂಡಳಿ, ಕಾಫಿ ಮಂಡಳಿಯ ಅಧಿಕಾರಿಗಳಿಂದ ಸೂಕ್ತ ಮಾಹಿತಿ, ಸಲಹೆಗಳನ್ನು ಪಡೆದು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಸಕ್ತ ಕೃಷಿಗೆ ಪೂರಕವಾದ ಮಳೆಯಾಗಿದೆ. ಅದರಲ್ಲೂ ಕಾಳುಮೆಣಸು ಉತ್ತಮ ಫಸಲಿನ ನಿರೀಕ್ಷೆ ಇದೆ. ಈ ಸಂದರ್ಭ ರೋಗಬಾಧೆ, ಕೀಟಬಾಧೆಯನ್ನು ತಡೆಗಟ್ಟಲು ಸೂಕ್ತವಾದ ಕ್ರಮ ತೆಗದುಕೊಳ್ಳಬೇಕು. ಮಣ್ಣು ಪರೀಕ್ಷೆಗೆ ಅನುಗುಣವಾಗಿ ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಕು. ಅವಶ್ಯಕತೆಗೆ ಅನುಗುಣವಾಗಿ ಕೀಟನಾಶಕ, ಸಿಲೀಂದ್ರನಾಶಕಗಳನ್ನು ಸಿಂಪಡಿಸಬೇಕು. ಕಾಫಿ, ಅಡಕೆ, ಕಾಳುಮೆಣಸು, ಭತ್ತ ಫಸಲು ಉಳಿಸಿಕೊಳ್ಳಲು ವಿಜ್ಞಾನಿಗಳ ಸಲಹೆ ಪಡೆದುಕೊಳ್ಳಬೇಕು ಎಂದು ಹೇಳಿದರು.ಬೆಂಗಳೂರಿನ ಎನ್‌ಡಿಆರ್‌ಎ ಸಂಶೋಧನ ಕೇಂದ್ರದ ಪಶುವಿಜ್ಞಾನಿ ಸುರೇಶ್ ಕುಮಾರ್ ಮಾತನಾಡಿ, ಮಲೆನಾಡು ಪ್ರದೇಶದಲ್ಲಿ ಹೈನುಗಾರಿಕೆ ಲಾಭದಾಯಕವಾಗಿದೆ. ಆದರೆ ಜಾನುವಾರುಗಳಿಗೆ ಕಾಯಿಲೆ ಬರದಂತೆ ಎಚ್ಚರಿಕೆ ವಹಿಸಬೇಕು. ಕಾಲುಬಾಯಿರೋಗ, ಚಪ್ಪೆರೋಗ ವೈರಸ್‌ನಿಂದ ಬರುತ್ತದೆ. ಗಲ್ಲೇರೋಗ ಬ್ಯಾಕ್ಟೀರಿಯಾದಿಂದ ಬರುತ್ತದೆ. ಇಂತಹ ಕಾಯಿಲೆಗಳಿಗೆ ಮುಂಜಾಗ್ರತ ಕ್ರಮವಾಗಿ ಲಸಿಕೆ ಹಾಕಿಸಿದರೆ, ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಹೇಳಿದರು. ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಉಚಿತ ಲಸಿಕಾ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು. ರೋಗಬಂದ ಮೇಲೆ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಮಳೆಗಾಲದಲ್ಲಿ ಜಾನುವಾರುಗಳನ್ನು ಹೊರಗಡೆ ಕಟ್ಟಬಾರದು ಎಂದು ಕಿವಿಮಾತು ಹೇಳಿದರು.ಕಾರ್ಯಾಗಾರದಲ್ಲಿ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಬಿಸ್ವಾರಂಜನ್ ಬೋಯಿ, ಪಶುವೈದ್ಯಾಧಿಕಾರಿ ಸತೀಶ್ ಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಡಾ.ಜಯಕುಮಾರ್ ಮಾಹಿತಿ ನೀಡಿದರು. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ಸಿ.ಈ.ವೆಂಕಟೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.