ಆಂಧ್ರಪ್ರದೇಶದ ಸಹಕಾರ ಪಡೆದು ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ
ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರ್ಕಾರ ಬದ್ಧವಾಗಿದೆ ಎಂದು ವಿಪ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ನೀರು ಹೆಚ್ಚಿನ ರೀತಿಯಲ್ಲಿ ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 41 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಎಡದಂಡೆ ಮತ್ತು ಬಲದಂಡೆ ಸೇರಿದಂತೆ ವಿಜಯನಗರ,ರಾಯಬಸವ ಮತ್ತು ಎಚ್ಎಲ್ಸಿ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದರು. ಕುಡಿಯುವ ನೀರಿಗೆ ಆದ್ಯತೆ ಜತೆಗೆ ಕೃಷಿಗೂ ನೀರು ಪೂರೈಸುತ್ತದೆ ಎಂದ ಅವರು, ಸಾಣಾಪುರ ಬಳಿ ಹೊಸ ಜಲಾಶಯ ನಿರ್ಮಿಸುವ ಕುರಿತು ರೈತರು ನೀಡಿದ ಮನವಿ ಕುರಿತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದರು.
ತುಂಗಭದ್ರಾ ಜಲಾಶಯದ ಗೇಟ್ ಮುರಿದ ಸಂದರ್ಭದಲ್ಲಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಲ್ಲ ಗೇಟ್‌ಗಳ ದುರಸ್ತಿಗೆ ಮುಂದಾದರು. ಆಂಧ್ರಪ್ರದೇಶದ ಸಹಕಾರ ಪಡೆದು ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಈ ಭಾಗದ ರೈತರಿಗೆ ಕಳೆದ ಎರಡು ಬೆಳೆಗಳು ಇಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೂಡಲೆ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಈ ವೇಳೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಶಾಂತಪ್ಪ, ಮೂಸ್ಟೂರು ರಾಜಶೇಖರಪ್ಪ, ರಮೇಶ ಗೌಳಿ, ಸರ್ವೇಶ ಮಾಂತಗೊಂಡ, ಜೋಗದ ಹನುಮಂತಪ್ಪ ನಾಯಕ, ಈ. ಪರಮೇಶಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.