ಬಳ್ಳಾರಿಯಲ್ಲಿ ಮುಂದುವರೆದ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Jul 04, 2026, 02:00 AM IST
ಬಳ್ಳಾರಿಯ 22ನೇ ವಾರ್ಡ್ ವೊಂದರಲ್ಲಿ ಅತಿಕ್ರಮಣ ಮಾಡಿದ್ದ ಜಾಗವನ್ನು ತೆರವುಗೊಳಿಸಿದ ಜಿಲ್ಲಾಡಳಿತ ಕಾನೂನು ಕ್ರಮದ ಎಚ್ಚರಿಕೆಯ ಬೋರ್ಡ್ ಅಳವಡಿಸಿತು.  | Kannada Prabha

ಸಾರಾಂಶ

ಬೆಳ್ಳಂಬೆಳಗ್ಗೆ ವಿವಿಧ ಯಂತ್ರೋಪಕರಣಗಳ ಮೂಲಕ ಸರ್ಕಾರಕ್ಕೆ ಸೇರಬೇಕಾದ ಜಾಗಗಳನ್ನು ಜಿಲ್ಲಾಡಳಿತದಿಂದ ತೆರವುಗೊಳಿಸಲಾಯಿತು.

ಬಳ್ಳಾರಿ: ನಗರದಲ್ಲಿ ರಾಜಕೀಯ ಮತ್ತಿತರ ಪ್ರಭಾವದಿಂದ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಜಿಲ್ಲಾಡಳಿತ ಕೈಗೊಂಡಿರುವ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಇಲ್ಲಿನ ವಿವಿಧ ವಾರ್ಡ್ ಗಳಲ್ಲಿರುವ ಕೋಟ್ಯಂತರ ರುಪಾಯಿ ಮೌಲ್ಯದ ಸರ್ಕಾರಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಾಯ್ದಿರಿಸಿದ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡವರಿಗೆ ಚುರುಕು ಮುಟ್ಟಿಸಲಾಯಿತು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರ ನಿರ್ದೇಶನದಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ. ಹಾಗೂ ತಹಶೀಲ್ದಾರ್ ಟಿ.ರೇಖಾ ನೇತೃತ್ವದ ಅಧಿಕಾರಿಗಳ ತಂಡವು ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಮತ್ತು ಸರ್ಕಾರಿ ಜಾಗಗಳನ್ನು ರಕ್ಷಿಸಲಾಯಿತು.

ಬೆಳ್ಳಂಬೆಳಗ್ಗೆ ವಿವಿಧ ಯಂತ್ರೋಪಕರಣಗಳ ಮೂಲಕ ಸರ್ಕಾರಕ್ಕೆ ಸೇರಬೇಕಾದ ಜಾಗಗಳನ್ನು ಜಿಲ್ಲಾಡಳಿತದಿಂದ ತೆರವುಗೊಳಿಸಲಾಯಿತು.

ಬಳ್ಳಾರಿ ನಗರದ ಸಿಟಿಎಸ್ ವಾರ್ಡ್ ನಂ. 21, ಬ್ಲಾಕ್ ನಂ.03 ರ ಟಿ.ಎಸ್. ನಂ.41ರಲ್ಲಿದ್ದ 0.08 ಸೆಂಟ್ಸ್ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿ ಅತಿಕ್ರಮಣಗೊಂಡ ಜಾಗವನ್ನು ಸುಪರ್ದಿಗೆ ಪಡೆದುಕೊಂಡು ಅತಿಕ್ರಮಣದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೋರ್ಡ್ ಹಾಕಲಾಗಿದೆ.

ವಾರ್ಡ್ ನಂ. 22, ಬ್ಲಾಕ್ ನಂ. 11 ರ ಟಿ.ಎಸ್ ನಂ. 94 ವಿ ಯಲ್ಲಿರುವ ಸುಮಾರು 0.49.6 ಸೆಂಟ್ಸ್ ವಿಸ್ತೀರ್ಣದ ಕರ್ನಾಟಕ ಸರ್ಕಾರದ ಬಯಲು ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ಅದೇ ರೀತಿ ವಾರ್ಡ್ ನಂ. 21, ಬ್ಲಾಕ್ ನಂ. 03 ರ ಟಿ.ಎಸ್ ನಂ. 43 ರ ಪೈಕಿ ವಿ ಯಲ್ಲಿರುವ 0.75 ಸೆಂಟ್ಸ್ ಜಾಗವು ಸಂಪೂರ್ಣ ಸರ್ಕಾರಿ ಸ್ವತ್ತಾಗಿದ್ದು, ಅಕ್ರಮ ಪ್ರವೇಶ ಅಥವಾ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ನಗರದ ಬುಡಾ ಪಾರ್ಕ್, ನಾರಾಯಣಪ್ಪ ಕಾಂಪೌಂಡ್, ಕೋಟೆ ಪ್ರದೇಶ ಹಾಗೂ ಸಿದ್ದಾರ್ಥ ನಗರ, ದೇವಿ ನಗರದ ಸರ್ಕಾರಿ ಜಾಗಗಳಿಗೆ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಒತ್ತುವರಿ ತೆರವು ಹಾಗೂ ರಕ್ಷಣಾ ಕಾರ್ಯ ಕೈಗೊಂಡರು.

ಸರ್ಕಾರಿ ಆಸ್ತಿಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಇದನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಡಿಡಿಎಲ್‌ಆರ್ ಪ್ರಮೋದ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಲ್ಲ ಘಟನೆ ಖಂಡಿಸಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ
ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ ಕುರಿತು ತೀರ್ಮಾನ