ಹರಪನಹಳ್ಳಿ: ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಶೀಘ್ರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರಿಂದ ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಯವರು ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಕೇಂದ್ರ ಸರ್ಕಾರ ಸಿಬಿಐ, ಐಟಿ, ಇಡಿ ಹಾಗೂ ರಾಜ್ಯಪಾಲರನ್ನು ಬಳಸಿಕೊಂಡು ತಮ್ಮ ವಿರುದ್ಧ ಮಾತನಾಡುವವರನ್ನು ತುಳಿಯಲು ಮಸಲತ್ತು ನಡೆಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಕೈಗೊಂಡಿರುವ ಪಾದಯಾತ್ರೆಗೆ ಅರ್ಥವಿಲ್ಲ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಬಿಜೆಪಿಯವರು ಪಾದಯಾತ್ರೆಯನ್ನು ದೆಹಲಿಗೆ ಕೈಗೊಳ್ಳಿ ಎಂದು ಸಲಹೆ ನೀಡಿದರು.ಶಾಸಕರ ಜೊತೆ ಚರ್ಚಿಸಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಂಡ್ರಿ ಗೋಣಿಬಸಪ್ಪ ಮಾತನಾಡಿ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ, ಕಾನೂನು ಪ್ರಕಾರವೇ ಮೂಡ ಸೈಟ್ ಗಳನ್ನು ತಮ್ಮ ಪತ್ತಿ ಹೆಸರಲ್ಲಿ ಪಡೆದಿದ್ದಾರೆ, ಆದರೆ ಬಿಜೆಪಿಯವರು ಸಿದ್ದರಾಮಯ್ಯನವರ ವಿರುದ್ದ ಷಡ್ಯಂತ್ರ ರೂಪಿಸಿದ್ದಾರೆ , ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರುವ ಹುನ್ನಾರ ನಡೆದಿದೆ ಹಾಗೇನಾದರೂ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ಟಿ.ವೆಂಕಟೇಶ ಮಾತನಾಡಿ ಎಂದೂ ಬಹುಮತ ಪಡೆಯದ ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಭ್ರಷ್ಟಾಚಾರ ನಡೆಸಿ ಇದೀಗ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯ ಖಂಡನೀಯ ಎಂದರು.