- ಸಾವಿರಾರು ಭಕ್ತರು ಭಾಗಿ, ಡಿ.ಜೆ. ಸೌಂಡ್ ಹಾಡಿಗೆ ಕುಣಿದು ಕುಪ್ಪಳಿಸಿದ ಜನತೆ
- ಅನ್ನ ಸಂತರ್ಪಣೆ, ಡಿವೈಎಸ್‌ಪಿ ಬಸವರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರುಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಆಶ್ರಯದಲ್ಲಿ ಮೂರನೇ ವರ್ಷ ಪ್ರತಿಷ್ಠಾಪಿಸಿದ ವಿಘ್ನ ನಿವಾರಕನ ಶೋಭಾಯಾತ್ರೆ, ವಿಸರ್ಜನೆ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡರು. ಪೊಲೀಸ್ ಸರ್ಪಗಾವಲಿನಲ್ಲಿ ಶನಿವಾರ ರಾತ್ರಿ ಉತ್ಸವ ಸಂಪನ್ನಗೊಂಡಿತು.
ವಿದ್ಯಾಗಣಪತಿಗೆ ಮಾಲಾರ್ಪಣೆ ಮಾಡಿದ ನಂತರ ಬೆಳಗ್ಗೆ ೧೦ ಗಂಟೆಗೆ ರಾಜಬೀದಿ ಉತ್ಸವ ಆರಂಭವಾಯಿತು. ಜಾನಪದ ಕಲಾ ತಂಡಗಳಾದ ಗೊಂಬೆ, ಡೊಳ್ಳು, ತಮಟೆ ಕಲಾವಿದರು ಮೆರವಣಿಗೆಗೆ ವಿಶೇಷ ಮೆರಗು ತಂದರು. ಯವಕರು ಕೇಸರಿ ಶಾಲು, ಪೇಟ ತೊಟ್ಟು ಡಿ.ಜೆ. ಹಾಡಿಗೆ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದರು. ಪಕ್ಷಗಳ ಮುಖಂಡರು ಯುವಕರನ್ನು ಹುರಿದುಂಬಿಸುತ್ತಾ ನೃತ್ಯದಲ್ಲಿ ಪಾಲ್ಗೊಂಡರು. ಯುವತಿಯರಿಗಾಗಿಯೇ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು.ಮಸೀದಿಯಿರುವ ರಸ್ತೆಯಲ್ಲಿ ಮೆರವಣಿಗೆ ಹೊರತುಪಡಿಸಲಾಗಿತ್ತು. ಶಿವಮೊಗ್ಗ ಹರಿಹರ ರಸ್ತೆ, ಸಂತೆ ರಸ್ತೆ, ನಂದಿಗುಡಿ ರಸ್ತೆ, ಪೇಟೆ ರಸ್ತೆ ಮೂಲಕ ಮೆರವಣಿಗೆ ಸಾಗಿತು. ಅನಂತರ ಆರನೇ ವಾರ್ಡ್ ಮೂಲಕ ಚಾನಲ್‌ನತ್ತ ತೆರಳಿ, ಶಾಸ್ತ್ರೋಕ್ತವಾಗಿ ಗಣೇಶ ವಿಸರ್ಜನೆ ನಡೆಯಿತು.
ಬಂದೋಬಸ್ತ್:ಡಿವೈಎಸ್‌ಪಿ ಬಸವರಾಜ್ ಮೆರವಣಿಗೆ ಹಿನ್ನೆಲೆ ಸ್ಥಳದಲ್ಲಿ ಹಾಜರಿದ್ದರು. ನೂರಾರು ಪೊಲೀಸರು, ಗೃಹ ರಕ್ಷಕದಳ, ಮೀಸಲು ಪೋಲಿಸ್ ತುಕಡಿಯೊಂದಿಗೆ ಶಾಂತಿ- ಸುವ್ಯವಸ್ಥೆಗೆ ಬಂದೋಬಸ್ತ್ ಕೈಗೊಂಡಿದ್ದರು.
ಮದ್ಯ ನಿಷೇಧ:ಬೆಳಗ್ಗೆ ಉಪಾಹಾರ ನಂತರ ೧೦ ಗಂಟೆಗೆ ಆರಂಭವಾದ ಅನ್ನ ಸಂತರ್ಪಣೆ ರಾತ್ರಿ 8 ಗಂಟೆಯಾದರೂ ನಡೆದಿತ್ತು. ದಾವಣಗೆರೆಯ ಯುವತಿಯರು ಪ್ರಸಾದ ಬಡಿಸುವ ಸೇವೆ ಸಲ್ಲಿಸಿದರು. ಗಣೇಶ ವಿಸರ್ಜನೆ ಅಂಗವಾಗಿ ಜಿಲ್ಲಾಡಳಿತ ಪಟ್ಟಣಾದ್ಯಂತ ಶನಿವಾರ ಬೆಳಗ್ಗೆ ೬ರಿಂದ ರಾತ್ರಿ ೧೦ ಗಂಟೆವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿತ್ತು.
- - - -೨೨ಎಂಬಿಆರ್೨: ಗಣಪತಿ ಮೂರ್ತಿ ವಿಸರ್ಜನೆಯಲ್ಲಿ ಯುವತಿಯರು ಡಿ.ಜೆ. ಸೌಂಡ್‌ಗೆ ನೃತ್ಯ ಮಾಡಿದರು.-೨೨ಎಂಬಿಆರ್೩: ಮಸೀದಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಲಾಗಿತ್ತು.