ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿನಕಾಯಿ ಬೆಳೆದರೆ ಲಾಭ: ಅಶೋಕ ದಳವಾಯಿ

KannadaprabhaNewsNetwork |  
Published : Oct 28, 2025, 01:00 AM IST
(ಫೋಟೊ 27ಬಿಕೆಟಿ7, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ತೋಟಗಾರಿಕೆ ಅಕಾಡೆಮಿ, ಅಡ್ವಾನ್ಸಡ್ ಟ್ರೇನಿಂಗ್ ಇನ್ ಪ್ಲಾಂಟ್ ಬ್ರೀಡಿಂಗ್ ಸಹಯೋಗದಲ್ಲಿ ಹಮ್ಮಿಕೊಂಡ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನ) | Kannada Prabha

ಸಾರಾಂಶ

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ತೋಟಗಾರಿಕೆ ಅಕಾಡೆಮಿ, ಅಡ್ವಾನ್ಸಡ್ ಟ್ರೇನಿಂಗ್ ಇನ್ ಪ್ಲಾಂಟ್ ಬ್ರೀಡಿಂಗ್ ಸಹಯೋಗದಲ್ಲಿ ಹಮ್ಮಿಕೊಂಡ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿನಕಾಯಿ ಬೆಳೆಯಲು ಮುಂದಾಗಬೇಕು. ಅಂದಾಗ ಮಾತ್ರ ಹೆಚ್ಚಿನ ಇಳುವಳಿ ಪಡೆಯುವುದಲ್ಲದೇ ಉತ್ತಮ ಬೆಲೆ ಸಿಗಲು ಸಾಧ್ಯವಾಗಲಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ತೋಟಗಾರಿಕೆ ಅಕಾಡೆಮಿ, ಅಡ್ವಾನ್ಸಡ್ ಟ್ರೇನಿಂಗ್ ಇನ್ ಪ್ಲಾಂಟ್ ಬ್ರೀಡಿಂಗ್ ಸಹಯೋಗದಲ್ಲಿ ಹಮ್ಮಿಕೊಂಡ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಉತ್ಪಾದನೆ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಮೊದಲು ಗುಣಮಟ್ಟದ ಬೀಜ ಮಾರುಕಟ್ಟೆಯಲ್ಲಿ ಲಭ್ಯವಾಗಬೇಕು. ರೈತರು ಸಹ ಗುಣಮಟ್ಟದ ಬೀಜ ಖರೀದಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ವಾತಾವರಣ ಕೂಡ ಬೆಳೆಯ ಮೇಲೆ ಪರಿಣಾಮ ಬೀರಲಿದ್ದು, ರೋಗಗಳ ನಿಯಂತ್ರಣ ಅಗತ್ಯವಾಗಿದೆ. ವೈಜ್ಞಾನಿಗಕ ಪದ್ಧತಿಯಲ್ಲಿ ಬೆಳೆದಲ್ಲಿ ಮಾತ್ರ ಲಾಭದಾಯಕ ಬೆಳೆಯಾಗಲಿದೆ. ಅತೀಯಾದ ರಾಸಾಯನಿಕ ಬಳಕೆ ಕೈಬಿಡಬೇಕು. ಇದರಿಂದ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಉತ್ಪಾದನೆ ಜೊತೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಭಾರತ ದೇಶದಲ್ಲಿ ಶೇ.40 ರಷ್ಟು ಮೆನಸಿನಕಾಯಿ ಬೆಳೆ ಬೆಳೆಯಲಾಗುತ್ತಿದ್ದು, ವಿವಿಧ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ದೇಶದ ಆಂಧ್ರ, ತೇಲಂಗಾಣ, ಮಧ್ಯಪ್ರದೇಶ ಹಾಗೂ ಓಡಿಸ್ಸಾ ರಾಜ್ಯಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

ನವದೆಹಲಿಯ ಐಸಿಎಸ್ಆರ್‌ ನ ಮಾಜಿ ಡಿಡಿಜಿ ಡಾ.ಎನ್.ಕೆ. ಕೃಷ್ಣಕುಮಾರ ಮಾತನಾಡಿ, ಕರ್ನಾಟಕದಲ್ಲಿ ಬ್ಯಾಡಗಿ ಮೆಣಸಿನಕಾಯಿ ಹೆಚ್ಚು ಖ್ಯಾತಿ ಪಡೆದರೆ, ಗುಜರಾತದಲ್ಲಿ ಕೃಷ್ಣಪ್ರಭಾ ಮೆಣಸಿನಕಾಯಿ ಖ್ಯಾತಿ ಪಡೆದಿದೆ. ಬ್ಯಾಡಗಿ ಮೆಣಸಿನಕಾಯಿಯಲ್ಲಿ ನಾನಾ ಬಗೆಗಳಿವೆ. ಮೆಣಸಿನಕಾಯಿ ಬೆಳೆಗೆ ಅಂಟಿಕೊಳ್ಳುವ ರೋಗ ನಿಯಂತ್ರಣಕ್ಕೆ ಪರಿಹಾರವಿದೆ. ರೈತರು ರಾಸಾಯನಿಕ ಬಳಸುತ್ತಿರುವುದರಿಂದ ರಫ್ತಿಗೆ ಅಡಚಣೆ ಆಗಿದೆ. ರಾಸಾಯನಿಕ ಬಳಕೆ ಕಡಿಮೆಯಾಗಬೇಕು ಎಂದು ಸಲಹೆ ನೀಡಿದರು.

ಔರಂಗಾಬಾದ್‌ನ ಎಟಿಪಿಬಿಆರ್‌ನ ನಿರ್ದೇಶಕರಾದ ಸುರೀಂದ್ರ ಟಿಕೂ ಮಾತನಾಡಿ, ಈ ಮೊದಲು ತರಕಾರಿ ಋತುಮಾನ ತಕ್ಕಂತೆ ಬೆಳೆಯುಲಾಗುತ್ತಿದ್ದು, ಈಗ ಎಲ್ಲ ಸಮಯದಲ್ಲಿ ತರಕಾರಿ ಬೆಳೆಯಬಹುದಾಗಿದೆ. ಮೆಣಸಿನಕಾಯಿ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದ್ದು, ಭಾರತದ ವಿಭಿನ್ನ ಪರಿಸರ ವಲಯಗಳಲ್ಲಿ ಬೆಳೆದ ಮೆಣಸಿನಕಾಯಿ ಪ್ರಭೇದಗಳು ತಮ್ಮದೇ ಆದ ವೈಶಿಷ್ಯತೆ ಹೊಂದಿದೆ ಎಂದರು.

ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, 210ಕ್ಕೂ ಅಧಿಕ ಪ್ರತಿನಿಧಿಗಳು, 38 ಆಹ್ವಾನಿತ ಭಾಷಣಕಾರರು ಮತ್ತು 20 ಉದ್ಯಮ ತಜ್ಞರನ್ನು ಹೊಂದಿರುವ ಈ ಸಮ್ಮೇಳನ ಮೆಣಸಿನಕಾಯಿ ಸಮಗ್ರ ಮಾಹಿತಿ ರೂಪಿಸಲು ಪರಿಪೂರ್ಣ ವೇದಿಕೆ ಒದಗಿಸುತ್ತದೆ. ಕೃಷ್ಣಪ್ರಭಾ ರುದ್ರ, ಕೃಷ್ಣಪ್ರಭಾ ಶಂಕರ, ಸಿದ್ಧ-1 ಮತ್ತು 2, ಕೃಷ್ಣಪ್ರಭಾ ಶುಕಾ ಆರು ಉನ್ನತ-ಕಾರ್ಯಕ್ಷಮತೆಯ ಪ್ರಭೇದ ಬಿಡುಗಡೆ ಮಾಡಿದ್ದೇವೆ. ಆಣ್ವಿಕ ಸಂತಾನೋತ್ಪತ್ತಿ ಮತ್ತು ರೋಗ ರೋಗ ನಿಯಂತ್ರಣದಲ್ಲಿ ನಮ್ಮ ನಿರಂತರ ಪ್ರಯತ್ನಗಳು ಹಾರ್ಟ್‌ ಸಾಂಸ್ಕೃತಿಕ ವಿಜ್ಞಾನದಲ್ಲಿ ನಾವೀನ್ಯತೆಗಾಗಿ ನಮ್ಮ ಬದ್ಧತೆ ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಪ್ರಥಮ ದಿನದಂದು ಒಟ್ಟು ಎರಡು ತಾಂತ್ರಿಕ ಗೋಷ್ಠಿಗಳಲಿ 15 ಜನ ವಿಜ್ಞಾನಿಗಳು ತಳಿ ವೈವಿದ್ಯತೆ ಸಂಪತ್ತಿನ ನಿರ್ವಹಣೆ ಮತ್ತು ಉಪಯೋಗ ಮತ್ತು ಪಾರಂಪರಿಕ ಮತ್ತು ಅಣ್ವಿಕ ತಳಿ ಅಭಿವೃದ್ಧಿ ಮೂಲಕ ಉತ್ಪಾದನೆ ಮತ್ತು ಗುಣಮಟ್ಟ ವೃದ್ಧಿಸುವ ಸಂಶೋಧನಾ ಪ್ರಬಂಧ ಮಂಡಿಸಿದರೆ, ಸಂಜೆ ತಜ್ಞರ ಸಮೂಹ ಚರ್ಚೆಯಲ್ಲಿ 8 ಜನ ತಜ್ಞರು ರೈತರ ಸಮಸ್ಯೆಗಳು ಮತ್ತು ತಂತ್ರಜ್ಞಾನ ವಿಸ್ತರಣಾ ಅಗತ್ಯತೆಗಳ ಕುರಿತು ಹಲವಾರು ವಿಷಯಗಳನ್ನು ವಿಶ್ಲೇಷಿಸಿ, ನಿರ್ದಿಷ್ಟ ಶಿಫಾರಸುಗಳನ್ನು ಪಟ್ಟಿ ಮಾಡಲಾಯಿತು.

ಭಾರತೀಯ ತೋಟಗಾರಿಕೆ ಅಕಾಡೆಮಿಯ ಲೋಗೋ ಬಿಡುಗಡೆ ಮಾಡಲಾಡಲಾಯಿತು. ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಅಧ್ಯಕ್ಷತೆ ವಹಿಸಿದ್ದರು. ತೋವಿವಿಯ ಸಂಶೋಧನ ನಿರ್ದೇಶಕ ಡಾ.ಬಿ. ಪಕೃದ್ದಿನ್‌, ಪ್ರಾಧ್ಯಾಪಕರು ಮತ್ತು ತರಬೇತಿ ಸಂಸ್ಥೆಯ ಮುಖ್ಯಸ್ಥ ಡಾ.ವಸಂತ ಗಾಣಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ತೋವಿವಿಯ ಸಭಾಭವನದ ಆವರಣದಲ್ಲಿ ಮೆಣಸಿನಕಾಯಿ ವಿವಿಧ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

PREV

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌