ಗುಜರಾತ್ ಮಾಡೆಲ್ ಈಗ ಭಾರತ್ ಮಾಡೆಲ್: ಸಂಸದ

KannadaprabhaNewsNetwork |  
Published : Jun 12, 2026, 02:15 AM IST
ಕಾಗೇರಿ ಸುದ್ದಿಗೋಷ್ಠಿ ನಡೆಸಿದರು  | Kannada Prabha

ಸಾರಾಂಶ

ಸ್ವಾತಂತ್ರ್ಯಾನಂತರ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಐತಿಹಾಸಿಕ ದಾಖಲೆಯನ್ನು ನರೇಂದ್ರ ಮೋದಿ ಬರೆದಿದ್ದಾರೆ.

ಪ್ರಧಾನಿ ಮೋದಿ 12 ವರ್ಷಗಳ ಸಾಧನೆ ಕುರಿತು ವಿಶ್ವೇಶ್ವರ ಕಾಗೇರಿ ಬಣ್ಣನೆಕನ್ನಡಪ್ರಭ ವಾರ್ತೆ ಕಾರವಾರ

ಸ್ವಾತಂತ್ರ್ಯಾನಂತರ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಐತಿಹಾಸಿಕ ದಾಖಲೆಯನ್ನು ನರೇಂದ್ರ ಮೋದಿ ಬರೆದಿದ್ದಾರೆ. ಒಂದು ಕಾಲದಲ್ಲಿ ದೇಶಕ್ಕೆ ಮಾದರಿಯಾಗಿದ್ದ ''''ಗುಜರಾತ್ ಮಾಡೆಲ್'''' ಇಂದು ಇಡೀ ಜಗತ್ತೇ ಮಾರ್ಗದರ್ಶನಕ್ಕಾಗಿ ಎದುರು ನೋಡುವ ''''ಭಾರತ್ ಮಾಡೆಲ್'''' ಆಗಿ ಹೊರಹೊಮ್ಮಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದ್ದಾರೆ.

ಗುರುವಾರ ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ 12 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಆಡಳಿತದ ಸಾಧನೆಗಳನ್ನು ತೆರೆದಿಟ್ಟರು.

ಪ್ರಧಾನಿ ಮೋದಿ 4,400 ದಿನಗಳ ಆಡಳಿತವನ್ನು ಪೂರೈಸುವ ಮೂಲಕ, ಈ ಹಿಂದೆ 4,398 ದಿನಗಳ ಕಾಲ ಆಡಳಿತ ನಡೆಸಿದ್ದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಲೆಕ್ಕವಿಲ್ಲದಷ್ಟು ಹಗರಣಗಳಲ್ಲಿ ಮುಳುಗಿ ಜನರ ವಿಶ್ವಾಸ ಕಳೆದುಕೊಂಡಿದ್ದ ಯುಪಿಎ ಆಡಳಿತದ ನಂತರ, ಎನ್‌ಡಿಎ ಸರ್ಕಾರವು ದೇಶದಲ್ಲಿ ಹೊಸ ಭರವಸೆ ಮತ್ತು ಒಗ್ಗಟ್ಟನ್ನು ಮೂಡಿಸಿದೆ ಎಂದರು.

ದೇಶದ ಗಡಿ ಹಾಗೂ ಆಂತರಿಕ ಭದ್ರತೆಯಲ್ಲಿ ಈ 12 ವರ್ಷಗಳಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ. ಭಯೋತ್ಪಾದನೆ ವಿರುದ್ಧ ''''''''ಝೀರೋ ಟಾಲರೆನ್ಸ್'''''''' ನೀತಿ ಅನುಸರಿಸಲಾಗುತ್ತಿದೆ, ನಕ್ಸಲ್ ಮುಕ್ತ ಭಾರತದತ್ತ ಯಶಸ್ವಿ ಹೆಜ್ಜೆ ಇಡಲಾಗಿದೆ. ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳ ಸವಾಲುಗಳನ್ನು ದಿಟ್ಟವಾಗಿ ಎದುರಿಸಲಾಗಿದೆ. ಜತೆಗೆ ಜಿ-20 ಶೃಂಗಸಭೆಯ ಯಶಸ್ವಿ ನೇತೃತ್ವದ ಮೂಲಕ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ನುಡಿದರು.

ದಿವಾಳಿಯಾಗಿದ್ದ ದೇಶದ ಆರ್ಥಿಕತೆಯನ್ನು ಮೇಲೆತ್ತಿ, ಇಂದು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. ಶೀಘ್ರದಲ್ಲೇ 3ನೇ ಸ್ಥಾನಕ್ಕೇರುವ ವಿಶ್ವಾಸವಿದೆ. ವಿವಿಧ ಯೋಜನೆಗಳ ಮೂಲಕ 25 ಕೋಟಿಗೂ ಹೆಚ್ಚು ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲಾಗಿದೆ. ಮಧ್ಯಮ ವರ್ಗದವರಿಗೂ ಅನುಕೂಲವಾಗುವಂತೆ ಆದಾಯ ತೆರಿಗೆ ಮಿತಿಯನ್ನು ₹12 ಲಕ್ಷ ವರೆಗೆ ವಿಸ್ತರಿಸುವ ಮಹತ್ವದ ಸುಧಾರಣೆ ತರಲಾಗಿದೆ. ಕೇವಲ 12 ವರ್ಷಗಳಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ, ಐಐಟಿ ಹಾಗೂ ಮೆಡಿಕಲ್ ಕಾಲೇಜುಗಳ ನಿರ್ಮಾಣದಲ್ಲಿ ಹಿಂದೆಂದೂ ಕಾಣದ ವೇಗ ಕಂಡಿದೆ ಎಂದು ವಿವರಿಸಿದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಹಾಗೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮಾಡುವ ಮೂಲಕ ಒಂದು ದೇಶ, ಒಂದು ಸಂವಿಧಾನ ಎಂಬ ಕನಸು ನನಸಾಗಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ, ಮಾಜಿ ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೇಕರ್, ಜಿಪಂ ಮಾಜಿ ಸದಸ್ಯ ಜಗದೀಶ ಮೊಗಟಾ, ಬಿಜೆಪಿ ನಗರಾಧ್ಯಕ್ಷ ನಾಗೇಶ ಕುರ್ಡೇಕರ್, ಪ್ರಮುಖರಾದ ವಕೀಲ ನಾಗರಾಜ ನಾಯಕ, ಸುನೀಲ್ ಸೋನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಸೇವೆ ಮಾನವೀಯತೆ ಮತ್ತು ರಾಷ್ಟ್ರೀಯತೆ ಗುಣಗಳ ಮೈಗೂಡಿಸಿಕೊಳ್ಳಿ
ರಸ್ತೆ ಇಲ್ಲದೆ ಪರದಾಟ: ಕದರಮಂಡಲಗಿ ಗ್ರಾಮಸ್ಥರ ಪ್ರತಿಭಟನೆ