ಪಟ್ಟಣದ ಸದ್ಗುರು ಸರ್ವೇಶ್ವರ ಮಠದ ಗುರುಗುಂಡಯ್ಯ ಅಪ್ಪನ 177ನೇ ಜಾತ್ರಾ ಮಹೋತ್ಸವ ಹಾಗೂ 17ನೇ ವರ್ಷದ ವಚನ ದರ್ಶನ ಪ್ರವಚನ ಕಾರ್ಯಕ್ರಮವು ಭಕ್ತಿ, ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.ಐದು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗುರುಗಳ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಕನ್ನಡಪ್ರಭ ವಾರ್ತೆ ತುರ್ವಿಹಾಳ

ಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಸೋಮವಾರ ಬೆಳಗ್ಗೆ ಗುರುಗುಂಡಯ್ಯ ಅಪ್ಪನ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಪುಷ್ಪಾಭಿಷೇಕ ನೆರವೇರಿಸಲಾಯಿತು. ಬಳಿಕ ಸಾಧು ಮಹಾರಾಜರ ಗದ್ದುಗೆ ಸನ್ನಿಧಿಯಿಂದ 1,001 ಕುಂಭ ಹಾಗೂ 101 ಕಳಸಗಳನ್ನು ಹೊತ್ತ ಮಹಿಳೆಯರಿಂದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ವಾದ್ಯಮೇಳಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ತುಲಾಭಾರ, ಅನ್ನದಾಸೋಹದ ವೈಭವ: ಜಾತ್ರೆಯ ಅಂಗವಾಗಿ 134 ತುಲಾಭಾರ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು, ಜಾನಪದ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ನಿರಂತರ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ವಿಶೇಷವಾಗಿ 10 ಸಾವಿರ ಜಿಲೇಬಿಗಳನ್ನು ವಿತರಿಸಲಾಯಿತು.
ಸರ್ವೇಶ್ವರ ಮಠದ ಗುರು ಗುಂಡಯ್ಯ ಅಪ್ಪಾಜಿ ರಚಿಸಿದ ಆರನೇ ಕೃತಿ ‘ನಿಶ್ಶಬ್ದ ಬ್ರಹ್ಮ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರಿಗೆ ಪರಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪುರವರ ಮಠದ ಅಮರಗುಂಡಯ್ಯ ಶಿವಾಚಾರ್ಯರು, ಅಮೋಘ ರೇವಣಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ್, ಮುದಿಸಂಗಯ್ಯ ಸ್ವಾಮಿ, ಮಂಜುನಾಥ ಅಪ್ಪಾಜಿ ಸೇರಿದಂತೆ ವಿವಿಧ ಮಠಗಳ ಪೂಜ್ಯರು, ಊರಿನ ಹಿರಿಯ ಮುಖಂಡರು, ಶ್ರೀಮಠದ ಸೇವಾ ಸಮಿತಿ ಸದಸ್ಯರು, ಪಪಂ ಸದಸ್ಯರು ಹಾಗೂ ಸಿಬ್ಬಂದಿ, ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.