ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿನ ವ್ಯಾಪಕ ಭ್ರಷ್ಟಾಚಾರ ವಿರೋಧಿಸಿ ಹಾಗೂ ಹಲವಾರು ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಿ ಜ್ಞಾನಗಂಗೆ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಹಂಜಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥ್ ಕೊಣ್ಣೂರ್, ತಾಲೂಕು ಸಂಚಾಲಕ ಮನೋಜ್ ಪಾಟೀಲ್, ನಗರ ಕಾರ್ಯದರ್ಶಿ ಶಾಂತಕುಮಾರ್, ಕಾರ್ಯಕರ್ತರಾದ ಶರಣು, ಆದಿತ್ಯ, ದರ್ಶನ್, ಬಸವರಾಜ್, ದಿಲೀಪ್, ಬಸವರಾಜ್, ಶ್ರವಣ್, ಸಂಜಯ್, ರೋಹಿತ್, ಪ್ರದೀಪ್, ಚೇತನ್, ಅಂಕುಶ್, ರಾಹುಲ್, ಶಿವರಾಜ್, ಅರುಣ್, ಸ್ನೇಹಾ, ಅರ್ಪಿತಾ, ಅನನ್ಯಾ, ಹಾಗೂ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ ಮಾತನಾಡಿ, ಗುವಿವಿ ವಿದ್ಯಾ ಕಾಶಿ ಆಗಬೇಕಿತ್ತು, ಅನೇಕ ಸಮಸ್ಯೆಗಳ ಗೂಡಾಗಿದೆ. ಸರಿಯಾದ ಸಮಯಕ್ಕೆ ಪರೀಕ್ಷೆಗಳನ್ನು ನಡೆಸಬೇಕು. ಅನೇಕ ಕಾಲೇಜುಗಳು ಪರೀಕ್ಷೆಯಲ್ಲಿ ಅಕ್ರಮ ನಡೆಸುತ್ತಿದ್ದು, ಅದಕ್ಕೆ ದಾಖಲೆ ಸಮೇತ ಮಾಹಿತಿ, ಮನವಿ ಕೊಟ್ಟಿದ್ದಾಗ್ಯೂ, ಮತ್ತೆ ಅದೇ ಕಾಲೇಜಿಗೆ ಪರೀಕ್ಷಾ ಕೇಂದ್ರ ಕೊಟ್ಟಿರೋದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎದು ಆರೋಪಿಸಿದರು.ಯಾವುದಾದರೂ ಅರ್ಜಿಯನ್ನು ವಿಶ್ವವಿದ್ಯಾಲಯಕ್ಕೆ ಕೊಟ್ಟರೆ ತಿಂಗಳುಗಟ್ಟಲೆ ಎಡತಾಕುವಂತೆ ಮಾಡುತ್ತಾರೆ, ಸರಿಯಾದ ಸಮಯಕ್ಕೆ ಕೆಲಸ ಮಾಡಿ ಕೊಡುವುದಿಲ್ಲ. ವಿಶ್ವವಿದ್ಯಾಲಯದ ಸರಿಯಾದ ಅಕ್ಯಾಡೆಮಿಕ್ ಕ್ಯಾಲೆಂಡರ್ ಇಲ್ಲ. ಬೇರೆ ವಿಷಯ ಹೋಲಿಕೆ ಮಾಡಿದರೆ ಸುಮಾರು ಆರು ತಿಂಗಳಿಂದ ಏಳು ತಿಂಗಳು ವಿಶ್ವವಿದ್ಯಾಲಯದ ಕ್ಯಾಲೆಂಡರ್ ಹಿಂದೆ ಇದೆ. ಪರೀಕ್ಷಾ ಕೇಂದ್ರಗಳು ಪಾರದರ್ಶಕವಾಗಿಲ್ಲ. ಅಂಕಪಟ್ಟಿ ಸರಿಯಾದ ಸಮಯಕ್ಕೆ ವಿಶ್ವವಿದ್ಯಾಲಯ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಿಶ್ವವಿದ್ಯಾಲಯದ ಹಾಸ್ಟೆಲ್‍ಗಳಲ್ಲಿ ಸರಿಯಾದ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಎಲ್ಲ ಸಮಸ್ಯೆಗಳನ್ನು ವಿಶ್ವವಿದ್ಯಾಲಯ ತಕ್ಷಣವೇ ಸರಿ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಈ ಭಾಗದ ಜನರಿಗೆ ಒಳ್ಳೆಯ ಶಿಕ್ಷಣ ನೀಡುವುದರ ಮೂಲಕ ಶರಣಬಸವೇಶ್ವರರ ನಾಡು ಆಗಿರುವ ನಮ್ಮ ಭಾಗವನ್ನು ಅಕ್ಷರ ದಾಸೋಹದ ನಾಡನ್ನಾಗಿ ಬದಲಾಯಿಸಬೇಕೆಂದು ಕೋರಿದರು.