ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮೂಳೆ ಮತ್ತು ಕೀಲು ವಿಭಾಗದ ಒಳ ರೋಗಿಗಳ ವಾರ್ಡ್ ವೀಕ್ಷಿಸಿದರು. ಅಲ್ಲಿ ಹಾಕಲಾಗಿದ್ದ ಊಟ ಉಪಹಾರದ ಮೆನು ಪರಿಶೀಲಿಸಿದರು. ಸಣ್ಣದಾಗಿ ಬರೆಯಲಾಗಿದ್ದ ಮೆನು ಫಲಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು ಆಸ್ಪತ್ರೆಯ ಪ್ರತಿ ವಾರ್ಡಿನಲ್ಲಿ ಎದ್ದು ಕಾಣುವಂತೆ ಆಹಾರದ ಮೆನು ಚಾರ್ಟ್ ಪ್ರದರ್ಶಿಸಲು ಸೂಚಿಸಿದರು.
ಇದೇ ವೇಳೆ ರೋಗಿಗಳಿಗೆ ವಿತರಿಸಲು ವಾರ್ಡಿಗೆ ತರಲಾದ ಮಧ್ಯಾಹ್ನದ ಊಟವನ್ನು ಪರಿಶೀಲಿಸಿದರು. ಅನ್ನ, ಸಾಂಬರ್, ಚಪಾತಿ, ಸಾಗು ಇನ್ನಿತರ ಆಹಾರಗಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಊಟದ ಸ್ಯಾಂಪಲ್ ಪಡೆದು ವೈಜ್ಞಾನಿಕವಾಗಿ ಗುಣಮಟ್ಟ ಪರೀಕ್ಷಿಸಲು ನಿರ್ದೇಶನ ನೀಡಿದರು.ವಾರ್ಡಿನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದ ಅಧ್ಯಕ್ಷರು ನಿಮಗೆ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರ ವಿತರಣೆಯಾಗುತ್ತಿದ್ದೆಯೇ ಎಂದು ಪ್ರಶ್ನಿಸಿ ಉತ್ತರ ಪಡೆದುಕೊಂಡರು. ಬಳಿಕ ಇನ್ನಿತರ ವಿಭಾಗಗಳಿಗೂ ಭೇಟಿ ಕೊಟ್ಟರು. ಆಸ್ಪತ್ರೆಯ ಕಚೇರಿಯಲ್ಲಿ ಊಟ ಉಪಹಾರ ಸಂಬಂಧ ಲೆಕ್ಕಪತ್ರಗಳನ್ನು ಪರಿಶೀಲಿಸಿದರು.
ಬಳಿಕ ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫಲಾನುಭವಿಗಳಿಗೆ ವಿತರಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಕೃಷಿ ಹೊಂಡ, ಕೃಷಿ ಪರಿಕರಗಳ ವಿತರಣೆಯ ಕಡತ ಪರಿಶೀಲಿಸಿ ಈಗಾಗಲೇ ಸೌಲಭ್ಯ ಪಡೆದುಕೊಂಡಿರುವ ಕೆಲವು ಫಲನುಭವಿಗಳಿಗೆ ಆಯೋಗದ ಅಧ್ಯಕ್ಷರೇ ಖುದ್ದು ದೂರವಾಣಿ ಮೂಲಕ ಮಾತನಾಡಿ, ನಿಮಗೆ ಸೌಲಭ್ಯ ತಲುಪಿದೆಯೇ?. ಸೌಲಭ್ಯ ಪಡೆದುಕೊಳ್ಳಲು ಏನಾದರೂ ಸಿಬ್ಬಂದಿಯಿಂದ ತೊಂದರೆಯಾಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು.
ತದನಂತರ ಬಂಡಿಗೆರೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು. ಆಹಾರ ತಯಾರಿಸುವ ಕೊಠಡಿ, ದಾಸ್ತಾನು ಮಾಡಲಾಗಿದ್ದ ಆಹಾರ ಸಾಮಗ್ರಿ, ಧಾನ್ಯಗಳು, ಇನ್ನಿತರ ಪರಿಕರಗಳನ್ನು ವೀಕ್ಷಿಸಿದರು. ಪೌಷ್ಠಿಕ ಆಹಾರ ಇನ್ನಿತರ ಸೌಲಭ್ಯಗಳಿಗೆ ನೊಂದಾಯಿಸಿರುವ ಗರ್ಭಿಣಿಯರು, ಬಾಣಂತಿಯರ ಮಾಹಿತಿ ಪಡೆದರು. ಕೆಲವು ಫಲಾನುಭವಿಗಳಿಗೆ ಅಧ್ಯಕ್ಷರೇ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಪಡೆದುಕೊಳ್ಳುತ್ತಿರುವ ಪೌಷ್ಠಿಕ ಆಹಾರದ ಬಗ್ಗೆ ವಿವರ ಪಡೆದುಕೊಂಡರು. ಆಹಾರ ವಿತರಣೆಯ ಕಡತವನ್ನು ಸರಿಯಾಗಿ ನಿರ್ವಹಿಸುವಂತೆ ಅಂಗನವಾಡಿ ಸಿಬ್ಬಂದಿಗೆ ತಾಕೀತು ಮಾಡಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಆಗಿಂದ್ದಾಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಾಮರಾಜನಗರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಕಾಲೇಜು ವಿದ್ಯಾರ್ಥಿನಿಲಯಕ್ಕೂ ಭೇಟಿ ಕೊಟ್ಟು ಆಹಾರ ಸಾಮಗ್ರಿಗಳ ದಾಸ್ತಾನು, ಕ್ರೀಡಾ ಸಾಮಗ್ರಿಗಳ ವಹಿ, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ಪರಿಶೀಲಿಸಿದರು.