ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಕುರಿತು ಮಾಜಿ ಸಚಿವ ಪುಟ್ಟರಾಜು ಮೇಲುಕೋಟೆಯ ವೈರಮುಡಿ ಉತ್ಸವದಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ದೇವೇಗೌಡರು, ಕುಮಾರಸ್ವಾಮಿ ಹಾಗೂ ಪಕ್ಷದ ನಾಯಕರು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಯಾರೇ ನಿಂತ್ರೂ ಕುಮಾರಣ್ಣನೇ ಅಭ್ಯರ್ಥಿ ಅನ್ನೋದು ನಮ್ಮ ಭಾವನೆ. ಮಂಡ್ಯ ಜಿಲ್ಲೆ ಜನತೆ ಅವರ ಮೇಲೆ ಪ್ರೀತಿ, ಭರವಸೆ ಇಟ್ಟಿದ್ದಾರೆ. ಹಾಗಾಗಿ ಇದು ಸೂಕ್ಷ್ಮವಾದ ವಿಷಯ. ಚನ್ನಪಟ್ಟಣ, ರಾಮನಗರ ಜನರ ಅಭಿಪ್ರಾಯ ಪಡೆದ ಬಳಿಕ ಪಕ್ಷ ತೀರ್ಮಾನ ಮಾಡುತ್ತೇವೆ ಎಂದರು.
ಚುನಾವಣೆಗೆ ಸಜ್ಜು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲೆಡೆ ಸಭೆಮಾಡಿ ಕಾರ್ಯಕರ್ತರನ್ನ ಸಜ್ಜುಗೊಳಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡ್ತಿದ್ದೇವೆ. ಡಾ.ಮಂಜುನಾಥ್ ಸರಳ, ಸಜ್ಜನಿಕೆಯ ವ್ಯಕ್ತಿ.ಸುಮಾರು ೮ ಲಕ್ಷ ಜನಕ್ಕೆ ಹೃದಯ ಆಪರೇಷನ್ ಮಾಡಿದ್ದಾರೆ. ಅವರ ಸೇವೆ ಬಗ್ಗೆ ಜನತೆ ಮಾತನಾಡ್ತಿದ್ದಾರೆ. ಅವರು ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶೀಘ್ರ ಚುನಾವಣಾ ಪ್ರಚಾರಕ್ಕೆ ಎಚ್‌ಡಿಕೆ: ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಗುರುವಾರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸ್ವತಃ ಡಾ.ಮಂಜುನಾಥ್ ಹಾಗೂ ಹಿರಿಯ ವೈದ್ಯ ಸಾಯಿ ಸತೀಶ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಮೂರೂವರೆ ಗಂಟೆಗಳ ಕಾಲ ಆಪರೇಷನ್ ನಡೆದಿದೆ. ರಾಜ್ಯದ ಜನರ ಆಶೀರ್ವಾದದಿಂದ ಗುಣಮುಖರಾಗಿದ್ದಾರೆ. ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿದ್ದಾರೆ. ಮುಂದಿನ ತಿಂಗಳು ೧ನೇ ತಾರೀಖಿನ ಒಳಗೆ ಚುನಾವಣಾ ಕಾರ್ಯಕ್ರಮಗಳಲ್ಲಿ ಕುಮಾರಣ್ಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ.ಮಂಜುನಾಥ್ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗಧಿ ವಿಚಾರಕ್ಕೆ ಭಾನುವಾರ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ. ಬಳಿಕ ಈ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡ್ತೇವೆ ಎಂದರು. ಲೀಡ್ ಬಾಕ್ಸ್...........ಕಾರ್ಯಕರ್ತರು ಒಗ್ಗೂಡಿ ಚುನಾವಣೆ ನಡೆಸಿ
ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ಒಗ್ಗೂಡಿ ಶ್ರಮಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಕಿವಿಮಾತು ಹೇಳಿದರು.
ಒಂದು ಕಡೆ ಧರ್ಮ ಇನ್ನೊಂದು ಕಡೆ ಅಧರ್ಮ ಇದೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮೈತ್ರಿ ಧರ್ಮವನ್ನು ಪಾಲಿಸಬೇಕು. ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಕುರಿತು ಉತ್ತಮ ಅಭಿಪ್ರಾಯವಿದೆ. ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ಸೇರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಎಲ್ಲರೂ ಒಗ್ಗೂಡಿ ಅವರ ಗೆಲವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಮಂಡ್ಯ ಅಭ್ಯರ್ಥಿ ಆಯ್ಕೆ ಕುರಿತು ಕಳೆದ ಮೂರು ತಿಂಗಳಿನಿಂದ ಸಭೆ ನಡೆಸಿದ್ದೇವೆ. ಅಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಅಭ್ಯರ್ಥಿ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಆದಷ್ಟು ಶೀಘ್ರದಲ್ಲೇ ಅಭ್ಯರ್ಥಿ ಯಾರೆಂದು ತಿಳಿಯಲಿದೆ ಎಂದರು.
ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಯಾರು ಊಹಿಸದ ರೀತಿ ಮಂಜುನಾಥ್ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ತಮ್ಮ ಸೇವಾವಧಿಯಲ್ಲಿ ಯಾವುದೇ ಕಳಂಕವಿಲ್ಲದೆ, ರಾಜಕೀಯ ಹಸ್ತಕ್ಷೇಪವಿಲ್ಲದೇ ಅವರು ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು, ಅಮಿತ್ ಶಾ, ಕುಮಾರಸ್ವಾಮಿ ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸೋಣ ಎಂದರು.ಡಿಕೆಶಿ ವಿರುದ್ಧ ವಾಗ್ದಾಳಿ: ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುವ ಅವರ ಕುಟುಂಬದಲ್ಲಿ ಅಣ್ಣ ಸಚಿವ, ತಮ್ಮ ಎಂಪಿ ನೆಂಟ ಎಂಎಲ್‌ಸಿ ಇದು ಸರಿಯೇ. ದೇವೇಗೌಡರು ಮಾತ್ರ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರಾ?. ಮಂಜುನಾಥ್ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಅವರಿಗೆ ಭಯ ಶುರುವಾಗಿದೆ. ಅದಕ್ಕೆ ಗಿಫ್ಟ್ ಕಾರ್ಡ್ ನೀಡಿ ಒಂದು ವರ್ಷ ಕಳೆದ ನಂತರ ಈಗ ಥವಾ, ಕುಕ್ಕರ್ ನೀಡುತ್ತಿದ್ದಾರೆ. ಜನರ ಮುಂದೆ ಹೋದರೆ ಎಲ್ಲಿ ಕಾರ್ಡ್ ಕುರಿತು ಪ್ರಶ್ನಿಸುತ್ತಾರೋ ಎಂದು ಗಿಫ್ಟ್‌ಗಳನ್ನು ಹಂಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಬಾರಿ ಅವರೊಡನೆ ಒಗ್ಗೂಡಿ ಚುನಾವಣೆ ನಡೆಸಿದ್ದಕ್ಕೆ ಅವರು ನಮ್ಮ ಕಾರ್ಯತಂತ್ರ ಎಲ್ಲವನ್ನು ಅರಿತರು. ಅದೇ ನಾವು ಮಾಡಿದ ಅಪರಾಧ. ಈ ಬಾರಿ ಅಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕಿದೆ. ಅವರು ಕನಕಪುರದಲ್ಲಿ ಪಡೆಯುವ ಲೀಡ್‌ಗೆ ಸಮನಾಗಿ ಚನ್ನಪಟ್ಟಣದಲ್ಲಿ ಲೀಡ್ ನೀಡಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು ಇತರರಿದ್ದರು.
ಪೊಟೋ೨೨ಸಿಪಿಟಿ೧: ಚನ್ನಪಟ್ಟಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.