ಬೈರಮಂಗಲ ರಣರಂಗ ಮಾಡಲು ಎಚ್ಡಿಕೆ ಹುನ್ನಾರ

KannadaprabhaNewsNetwork |  
Published : Jul 12, 2026, 02:15 AM IST
11ಕೆಆರ್ ಎಂಎನ್ 7.ಜೆಪಿಜಿಬೈರಮಂಗಲದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ರೈತಮುಖಂಡ ಹೊಸೂರು ರಾಜಣ್ಣ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ಸಹಿಸಿಕೊಳ್ಳಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಹೊರ ಜಿಲ್ಲೆಗಳಿಂದ ಬಸ್ಸುಗಳಲ್ಲಿ ಜನರನ್ನು ಕಳುಹಿಸಿ ಬೈರಮಂಗಲ ಗ್ರಾಮವನ್ನು ರಣರಂಗ ಮಾಡಲು ಹೊರಟಿದ್ದಾರೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ಆರೋಪಿಸಿದರು

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ಸಹಿಸಿಕೊಳ್ಳಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಹೊರ ಜಿಲ್ಲೆಗಳಿಂದ ಬಸ್ಸುಗಳಲ್ಲಿ ಜನರನ್ನು ಕಳುಹಿಸಿ ಬೈರಮಂಗಲ ಗ್ರಾಮವನ್ನು ರಣರಂಗ ಮಾಡಲು ಹೊರಟಿದ್ದಾರೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ಆರೋಪಿಸಿದರು.

ಬೈರಗಮಂಗಲ ಶಾಲೆ ಬಳಿ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ನಡೆಯುತ್ತಿರುವ ಶಾಂತಿಯುತ ಹೋರಾಟದ ದಾರಿ ತಪ್ಪಿಸುವ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ 20 ಸಾವಿರ ರೈತರಿದ್ದೇವೆ. ಈ ಪೈಕಿ ನೂರು ಜನ ಮಾತ್ರ ಟೌನ್ ಶಿಪ್ ಯೋಜನೆ ವಿರೋಧ ಹೋರಾಟ ಮಾಡುತ್ತಿದ್ದಾರೆ. ಆದರೆ, ನೂರಾರು ಸಂಖ್ಯೆಯಲ್ಲಿ ವಾಹನಗಳ ಮೂಲಕ ಹೊರಗಡೆಯಿಂದ ಜನರು ಬಂದು ರೈತರ ಹೋರಾಟದ ದಿಕ್ಕನ್ನೇ ಬದಲಿಸುತ್ತಿದ್ದಾರೆಂದು ದೂರಿದರು.

ಸಮಾವೇಶದ ಹೆಸರಿನಲ್ಲಿ ಇಂದು ಬೆಳಿಗ್ಗೆ ಹತ್ತಾರು ಬಸ್ಸುಗಳಲ್ಲಿ ಬೇರೆ ಜಿಲ್ಲೆಯ ರೈತರನ್ನು ಕರೆತಂದಿದ್ದಾರೆ. ಅವರಿಗೆ ಇಲ್ಲಿನ ವಾಸ್ತವ ಸ್ಥಿತಿ ನಮಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರೇ ನಮಗೆಲ್ಲಾ ಬಸ್ ವ್ಯವಸ್ಥೆ ಮಾಡಿಕೊಟ್ಟರೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಈ ರೀತಿ ರಾಜಕೀಯ ಮಾಡಿ ರೈತರ ಮೇಲೆ ದಬ್ಬಾಳಿಕೆ ಮಾಡಬೇಕೇ ಎಂದು ಪ್ರಶ್ನಿಸಿದರು.

ಈ ಹಿಂದೆ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರನ್ನು ನಿಂದಿಸಿರುವ ವಿಡಿಯೋ ಜಗಜ್ಜಾಹೀರಾಗಿದೆ. ನೀವು ಮುಖ್ಯಮಂತ್ರಿಯಾಗಿ ತಾಜ್ ಹೋಟೆಲ್ ನಲ್ಲಿ ಒಂದೂವರೆ ವರ್ಷ ಏನೇನು ಮಾತಾಡಿದ್ದೀರಿ. ಆ ಎಲ್ಲಾ ಟೇಪ್‌ಗಳು ನಮ್ಮ ಬಳಿಯಿವೆ. ರಿಲೀಸ್ ಮಾಡಬೇಕಾ. ನೀವು ದೊಡ್ಡವರು ಸುಳ್ಳನ್ನೇ ನಿಜವೆಂದು ನಂಬಿಸುತ್ತೀರಾ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆ ಎಂದು ವಾಗ್ದಾಳಿ ನಡೆಸಿದರು.

ಟೌನ್ ಶಿಪ್ ಯೋಜನೆ ನಿಮ್ಮ ಕೂಸು, ಅದರ ಬಗ್ಗೆ ಚರ್ಚಿಸಲು ಪರ ವಿರೋಧ ಎರಡೂ ಕಡೆ ರೈತರನ್ನು ಚರ್ಚೆಗೆ ಕರೆಯಿರಿ ನಾವು ಸಹ ಬರುತ್ತೇವೆ. ಭೈರಮಂಗಲ ಗ್ರಾಮದಲ್ಲಿ ಯೋಜನೆ ವಿರುದ್ಧ ನೀವು ಸಿದ್ಧಪಡಿಸಿರುವ ವೇದಿಕೆಯಲ್ಲಿ ನಿಮ್ಮ ಪಟಾಲಂ ಅನ್ನು ಪ್ರತಿಭಟಿಸಲು ಬಿಟ್ಟಿದ್ದೀರಿ. ನಿಮ್ಮ ಪಕ್ಷದ ಕೆಲ ಮುಖಂಡರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಳೆದ 30 ವರ್ಷದಿಂದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಾಗಿ ಬಂದು ಉಭಯ ಗುಂಪುಗಳ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿ ಸಣ್ಣ ರಾಜಕೀಯಕ್ಕೆ ಇಳಿಯಬೇಡಿ ಎಂದು ಹೊಸೂರು ರಾಜಣ್ಣ ವಾಗ್ದಾಳಿ ನಡೆಸಿದರು.

ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ರೆಡ್ ಜೋನ್ ಮಾಡಿ ರೈತರ ಮರಣ ಶಾಸನ ಬರೆದವರು ನೀವು. ನಾವೆಲ್ಲರೂ ನಿಮ್ಮ ಪಕ್ಷದಲ್ಲಿದ್ದವರು ಇಂದು ಸುಳ್ಳು ಏಕೆ ಹೇಳುತ್ತೀರಾ. ರೆಡ್ ಜೋನ್ ವನವಾಸಕ್ಕೆ ಮುಕ್ತಿಕೊಡಿ ಎಂದು ಹಲವಾರು ಬಾರಿ ಕೇಳಿಕೊಂಡಿದ್ದೇವೆ. ಆದರೆ ನೀವು ನಮ್ಮ ಮಾತಿಗೆ ಸೊಪ್ಪು ಹಾಕಲಿಲ್ಲ. ನಿಮ್ಮ ನಿರ್ಲಕ್ಷದಿಂದ ಸುಮಾರು 2500 ರಿಂದ 3000 ಎಕರೆಯಷ್ಟು ಜಮೀನನ್ನು ರೈತರು ಕಡಿಮೆ ಬೆಲೆ ಕಳೆದುಕೊಂಡಿದ್ದಾರೆ ಎಂದರು.

ವಾಸ್ತವದಲ್ಲಿ ಉದ್ದೇಶಿತ ಪ್ರದೇಶದ ಶೇ.80ರಷ್ಟು ರೈತರು ಯೋಜನೆ ಭೂಸ್ವಾಧೀನಕ್ಕೆ ಒಪ್ಪಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿಲ್ಲ. ಈಗಾಗಲೇ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಗ್ರಾಮದ ರೈತರು ಪರಿಹಾರದ ಹಣ ಪಡೆದು ಬೇರೆ ಕಡೆ ಜಮೀನು ಖರೀದಿಸುತ್ತಿದ್ದಾರೆ. ಯೋಜನೆ ಪರವಾಗಿರುವ ರೈತರು ಸ್ವಯಂ ಪ್ರೇರಿತರಾಗಿ ವೇದಿಕೆಗೆ ಬಂದು ಬೆಂಬಲ ಕೊಡುತ್ತಿದ್ದಾರೆ. ಇಲ್ಲಿನ ದುಷ್ಪರಿಣಾಮಗಳಿಂದ ಅನೇಕ ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಸರ್ಕಾರ ನಮ್ಮ ಭೂಮಿ ಸ್ವಾಧೀನ ಪಡಿಸಿಕೊಂಡು ಶೀಘ್ರ ಪರಿಹಾರ ವಿತರಿಸಲಿ ಎಂದು ಆಗ್ರಹಿಸಿದರು.

ಈ ವೇಳೆ ಭೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ಅಂಜಿನಪ್ಪ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ಬೈರಾರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ ಕುಮಾರ್, ನಾಗೇಶ್, ಅಂಚೀಪುರ ಶೇಖರ್ ಮತ್ತಿತರರು ಇದ್ದರು.

11ಕೆಆರ್ ಎಂಎನ್ 7.ಜೆಪಿಜಿ

ಬೈರಮಂಗಲದಲ್ಲಿ ರೈತಮುಖಂಡ ಹೊಸೂರು ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ: ಜಿವಿಪಿಗಳು ಹೈರಾಣು
ಬಣಜಿಗ ಸಮಾಜಕ್ಕೆ ಅವಹೇಳನ ಆರೋಪ: ಪ್ರಕರಣ ದಾಖಲು