ಆರೋಗ್ಯ ಸಂಪತ್ತು ಬಹುಮುಖ್ಯ: ಡಾ. ಬಸವರಾಜ ಕ್ಯಾವಟರ್‌

KannadaprabhaNewsNetwork |  
Published : Dec 16, 2024, 12:48 AM IST
ಪೋಟೊ15ಕೆಪಿಎಲ್1:‌ ಕೊಪ್ಪಳ ನಗರದ ಕೆ.ಎಸ್‌.ಆಸ್ಪತ್ರೆಯ ಸಭಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಮತ್ತು ಕೆ.ಎಸ್.ಆಸ್ಪತ್ರೆಯ ಆಶ್ರಯದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಬಸವರಾಜ ಕ್ಯಾವಟರ ಮಾತನಾಡಿದರು | Kannada Prabha

ಸಾರಾಂಶ

ಮನುಷ್ಯನಿಗೆ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹುಮುಖ್ಯವಾಗಿದೆ.

ಪತ್ರಕರ್ತರು, ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮನುಷ್ಯನಿಗೆ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹುಮುಖ್ಯವಾಗಿದೆ. ಆರೋಗ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ ಎಂದು ಕೆ.ಎಸ್. ಆಸ್ಪತ್ರೆಯ ಅಧ್ಯಕ್ಷ ಡಾ. ಬಸರಾಜ ಕ್ಯಾವಟರ್‌ ಹೇಳಿದರು.

ನಗರದ ಕೆ.ಎಸ್‌.ಆಸ್ಪತ್ರೆಯ ಸಭಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಮತ್ತು ಕೆ.ಎಸ್.ಆಸ್ಪತ್ರೆಯ ಆಶ್ರಯದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಕೆಲವು ಕಾಯಿಲೆಗಳು ಹುಟ್ಟಿನಿಂದ ಬರುತ್ತವೆ. ಇನ್ನು ಕೆಲವು ಕಾಯಿಲೆಗಳು ಕೆಲಸದ ಒತ್ತಡ, ಆಹಾರ ಪದ್ಧತಿ ಮತ್ತು ದುಶ್ಚಟಳಿಂದಾಗಿ ನಾವೇ ಪಡೆದುಕೊಳ್ಳುತ್ತೇವೆ ಎಂದರು.

30 ವರ್ಷ ದಾಟಿದವರು ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ತಪಾಸಣಾ ಶಿಬಿರದಿಂದ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಲು ಸಹಕಾರಿ ಆಗಲಿದೆ. ಸರ್ಕಾರದ ಯೋಜನೆಗಳು ನಮ್ಮ‌ ಆಸ್ಪತ್ರೆಯ ವ್ಯಾಪ್ತಿಯಲ್ಲಿವೆ. ಬಹಳಷ್ಟು ವಿಮಾ ಸೌಲಭ್ಯಗಳಿದ್ದು, ಸರ್ಕಾರದ ಆರೋಗ್ಯ ವಿಮೆ ಮಾಡಿಕೊಂಡರೆ, ಉಚಿತವಾಗಿ ಆರೋಗ್ಯ ಚಿಕಿತ್ಸೆ ಪಡೆಯಬಹುದು. ಯಶಸ್ವಿನಿ ಯೋಜನೆ ಉತ್ತಮವಾಗಿದೆ. ಇದನ್ನು ಮಾಡಿಸಿಕೊಳ್ಳಬೇಕು. ಮುಂಜಾಗ್ರತೆ ವಹಿಸುವುದರಿಂದಲೂ ಕಾಯಿಲೆ ತಡೆಗಟ್ಟಬಹುದು. ಎಲ್ಲ ಕಡೆಗಳಲ್ಲಿ ತಪಾಸಣಾ ಶಿಬಿರ ಮಾಡುತ್ತಾರೆ. ಆದರೆ ಪತ್ರಕರ್ತರಿಗೆ ಉತ್ತಮವಾದ ತಪಾಸಣಾ ಶಿಬಿರ ಮಾಡಬೇಕು ಎನ್ನುವ ಉದ್ದೇಶದಿಂದ ನಾವು ಆಯೋಜಿಸಿದ್ದು, ಎಲ್ಲ ಪತ್ರಕರ್ತರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ. ಮಾತನಾಡಿ, ಪತ್ರಕರ್ತರು ಕಾರ್ಯದ ಒತ್ತಡದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಬೇರೆಯವರಿಗೆ ಆರೋಗ್ಯ ಸೇವೆಯಲ್ಲಿ ಸಮಸ್ಯೆಯಾದಾಗ ಧ್ವನಿ ಎತ್ತುವ ಪತ್ರಕರ್ತರು, ತಮ್ಮ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸಮಸ್ಯೆಯಾದಾಗ ಸಮಯ ಕೊಡಲಾಗುವುದಿಲ್ಲ‌. ಹಾಗಾಗಿ ಹೃದಯ, ಕಿಡ್ನಿ ಸೇರಿ ವಿವಿಧ ತಪಾಸಣೆ ಮಾಡಲಾಗುತ್ತಿದೆ. ಆಸ್ಪತ್ರೆಯವರಿಗೆ ಪತ್ರಕರ್ತರ ಬಗ್ಗೆ ವಿಶೇಷ ಕಾಳಜಿ ಇದೆ. ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡೋಣ ಎಂದರು.

ಮೀಡಿಯಾ ಕ್ಲಬ್ ಕಾರ್ಯದರ್ಶಿ ದತ್ತು ಕಮ್ಮಾರ ಮಾತನಾಡಿದರು.

ಈ ಸಂದರ್ಭ ಕೆ.ಎಸ್.ಆಸ್ಪತ್ರೆಯ ಮ್ಯಾನೇಜರ್ ಸಂಪತ್‌ಕುಮಾರ, ಮೀಡಿಯಾ ಕ್ಲಬ್ ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಖಜಾಂಚಿ ಅನಿಲ ಬಾಚನಹಳ್ಳಿ, ಪತ್ರಕರ್ತರಾದ ಸಂಜಯ ಚಿಕ್ಕಮಠ, ಹುಸೇನಪಾಷಾ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ