ಕನ್ನಡಪ್ರಭ ವಾರ್ತೆ ಶಿರಸಿ
ನಗರ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅನೇಕ ಲೇಔಟ್ ಗಳು ತಲೆಯೆತ್ತಿ ನಿಂತಿವೆ ಮತ್ತು ಕೆಲವು ನಿರ್ಮಾಣ ಹಂತದ ಲೇ ಔಟ್ ಗಳಲ್ಲಿ ನೀರು ತುಂಬುವುದು ಸರ್ವೇ ಸಾಮಾನ್ಯವಾಗಿದೆ. ಆದುದರಿಂದ ತಗ್ಗು ಪ್ರದೇಶದಲ್ಲಿ ಲೇಔಟ್ ನಿರ್ಮಿಸುವವರಿಗೆ ನಗರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರ ಸ್ಥಳ ಪರಿಶೀಲಿಸಿ ಪರವಾನಿಗೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳೆದೆರಡಯ ದಿನ ಸುರಿದ ಮಳೆಗೆ ನಗರದ ಪ್ರಸಿದ್ಧ ಕೋಟೆ ಕೆರೆ ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ಅದರಂತೆ, ಅಯ್ಯಪ್ಪ ನಗರದ ಚೌಡೇಶ್ವರಿ ಕಾಲನಿ, ಶ್ರೀಧರ್ ನಗರ, ಸಮೃದ್ಧಿ ನಗರ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಗರಗಳಲ್ಲಿ ಮಳೆ ನೀರಿನಿಂದ ಅನಾಹುತ ಸೃಷ್ಟಿಯಾಗಿದೆ.ಇನ್ನು ಕೆಲವು ನಗರದ ನಿವಾಸಿಗಳು ಮಳೆ ಅಬ್ಬರಕ್ಕೆ ರಾತ್ರಿ ಇಡಿ ನಿದ್ರೆ ಇಲ್ಲದೆ ಏನಾಗತ್ತೋ ಏನಿಲ್ಲ ಎಂಬ ಭಯದಲ್ಲಿ ಪರಿತಪಿಸುವಂತಾಗಿದೆ. ಇದಕ್ಕೆಲ್ಲ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಆದಾಗ ರಸ್ತೆ ಉದ್ದಕ್ಕೂ ನೀರು ಹರಿದು ಅನೇಕ ಅವಾಂತರಗಳನ್ನು ಸೃಷ್ಟಿ ಮಾಡುತ್ತಾ ತಗ್ಗು ಪ್ರದೇಶಕ್ಕೆ ನೀರು ನುಗುತ್ತದೆ.
ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಈಗಾಗಲೇ ನಗರಸಭೆಯಿಂದ ನೀರು ತುಂಬಿದ ಸ್ಥಳಗಳಿಗೆ ನಾವು ಮತ್ತು ಸಿಬ್ಬಂದಿ ಭೇಟಿ ನೀಡಿ ನೀರಿನಲ್ಲಿ ಅಡಗಿರುವ ಕಸ ಕಡ್ಡಿ ಸ್ವಚ್ಛತೆಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್ ತಿಳಿಸಿದ್ದಾರೆ.